ಲೋಕಸಮರ ಸೀಟು ಹಂಚಿಕೆ – ದೋಸ್ತಿಗಳ ನಡುವೇ ಮೂಡದ ಒಮ್ಮತ

Public TV
2 Min Read

– ಹೈಕಮಾಂಡ್ ಅಂಗಳಕ್ಕೆ ಸೀಟು ಹಂಚಿಕೆ ಶಿಫ್ಟ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಮುಂದುವರಿಸಲು ಮುಂದಾಗಿರುವ ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ನಡುವೆ ಇನ್ನು ಒಮ್ಮತ ಮೂಡಿಲ್ಲ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಎರಡು ಪಕ್ಷಗಳು ನಾಯಕರು ಭೇಟಿ ನೀಡಿ ಚರ್ಚೆ ನಡೆಸಿದರು. ಈ ಎರಡು ಪಕ್ಷಗಳ ನಾಯಕರು ಕೂಡ ತಮ್ಮ ಬೇಡಿಕೆಯಿಂದ ಹಿಂದೆ ಸರಿದಿಲ್ಲ ಎನ್ನಲಾಗಿದ್ದು, ಕೆಲ ಕ್ಷೇತ್ರಗಳ ಹಂಚಿಕೆ ವಿಚಾರವೂ ಕೂಡ ಗೊಂದಲ ಹೆಚ್ಚಾಗಲು ಕಾರಣವಗಿದೆ.

ಪ್ರಮುಖವಾಗಿ ಹಳೆ ಮೈಸೂರು ಭಾಗದ ಸೀಟುಗಳ ಹಂಚಿಕೆ ಬಗ್ಗೆ ಮತ್ತಷ್ಟು ಸಮಸ್ಯೆಯಾಗಿದ್ದು, ಇಂದಿನ ಸಭೆಯಲ್ಲಿ ಈ ಬಗ್ಗೆ ಈ ತಿಕ್ಕಾಟಕ್ಕೆ ಬ್ರೇಕ್ ಹಾಕುತ್ತಾರೆ ಎನ್ನಲಾಗಿತ್ತು. ಆದರೆ ಸಭೆಯಲ್ಲಿ ನಾಯಕರ ನಡುವೆ ಒಮ್ಮತ ನಿರ್ಧಾರ ಇಲ್ಲದ ಕಾರಣ ಹೈಕಮಾಂಡ್ ಅಂಗಳಕ್ಕೆ ಕಳುಹಿಸಲಾಗಿದೆ. ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಹಾಗೂ ರಾಹುಲ್ ಗಾಂಧಿ ನಡುವೆ ಮಾತುಕತೆ ಬಳಿಕವೇ ಸೀಟು ಹಂಚಿಕೆ ಫೈನಲ್ ಆಗಲಿದೆ.

ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಬದ್ಧ ವೈರಿಗಳಾಗಿರುವ ಕಾರಣ ಎರಡು ಪಕ್ಷಗಳು ತಮ್ಮ ಸ್ಥಾನವನ್ನ ಸುಲಭವಾಗಿ ಬಿಟ್ಟುಕೊಡಲು ಸಿದ್ಧವಿಲ್ಲ ಎನ್ನಲಾಗಿದೆ. ಜೆಡಿಎಸ್ 12 ಸ್ಥಾನಗಳಿಗೆ ಪಟ್ಟು ಹಿಡಿದಿರುವ ಕಾರಣ ಎಷ್ಟು ಸ್ಥಾನಗಳು ಲಭ್ಯವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಸಭೆಯಲ್ಲಿ ಮಂಡ್ಯ ವಿಚಾರದ ಬಗ್ಗೆ ಚರ್ಚೆ ನಡೆಸಲು ಸಿಎಂ ಆಸಕ್ತಿ ವಹಿಸಲಿಲ್ಲ ಎನ್ನಲಾಗಿದ್ದು, ಮಂಡ್ಯ ಹಾಗೂ ಹಾಸನ ಹೇಗಿದ್ದರೂ ನಿರ್ಧಾರವಾಗಿದೆ. ಉಳಿದ 26 ಕ್ಷೇತ್ರಗಳ ಬಗ್ಗೆ ಮಾತನಾಡೋಣ ಎಂದು ಮಾತು ಆರಂಭಿಸಿದ್ದರು ಎಂಬ ಮಾಹಿತಿ ಲಭಿಸಿದೆ. ಇತ್ತ ದಿನೇಶ್ ಗುಂಡೂರಾವ್ ಅವರಿಂದ ಲೋಕಸಭಾ ಕ್ಷೇತ್ರಾವಾರು ಮುಖಂಡರ ಮಾಹಿತಿಯನ್ನು ಸಿದ್ದರಾಮಯ್ಯ ಅವರು ಪಡೆದರು. ಇತ್ತ ಜೆಡಿಎಸ್ ಪಟ್ಟು ಹಿಡಿದಿರುವ ಕಾರಣ 12 ಕ್ಷೇತ್ರಗಳ ಬದಲಾಗಿ, 7 ರಿಂದ 8 ಕೇತ್ರಗಳನ್ನು ಕಾಂಗ್ರೆಸ್ ಬಿಟ್ಟು ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಹಿಂದೆ 9 ಸ್ಥಾನಗಳಿಗೆ ಜೆಡಿಎಸ್ ಸಮ್ಮತಿ ಸೂಚಿಸಲಾಗಿತ್ತು ಎಂದು ವರದಿಯಾಗಿತ್ತು. ಮಾರ್ಚ್ 10 ಒಳಗೆ ಸೀಟು ಹಂಚಿಕೆ ಫೈನಲ್ ಆಗುವ ಸಾಧ್ಯತೆಯಿದೆ.

ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಎರಡು ಪಕ್ಷಗಳು ನಾಯಕರು ಯಾವ ಸ್ಥಾನದಲ್ಲಿ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಮತ್ತೊಂದು ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಮೈತ್ರಿ ಸ್ಥಾನ ಹಂಚಿಕೆ ರಾಜ್ಯ ನಾಯಕರ ಸಭೆಯಲ್ಲೇ ಅಂತಿಮ ಆಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ನಮ್ಮ ಗುರಿಯಾಗಿದ್ದು, ಇಲ್ಲಿ ಕ್ಷೇತ್ರಗಳ ಹಂಚಿಕೆ ಸಂಖ್ಯೆ ಮುಖ್ಯವಲ್ಲ. ಮೈತ್ರಿ ಸರ್ಕಾರದಲ್ಲಿ ನಾವು 20ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದರು.

ಸಮನ್ವಯ ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಡ್ಯಾನಿಷ್ ಅಲಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *