ಎಚ್‍ಡಿಡಿ ಎದುರೇ ಜೆಡಿಎಸ್‍ನ ಅಲ್ಪಸಂಖ್ಯಾತ ಮುಖಂಡರ ನಡುವೆ ಜಟಾಪಟಿ

Public TV
2 Min Read

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಎದುರೇ ಅಲ್ಪಸಂಖ್ಯಾತ ಮುಖಂಡರು ಜಗಳಾಡಿಕೊಂಡ ಪ್ರಸಂಗ ಇಂದು ಜೆಪಿ ಭವನದಲ್ಲಿ ನಡೆದಿದೆ.

ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಚಾಮರಾಜಪೇಟೆ ಪರಾಜಿತ ಅಭ್ಯರ್ಥಿ ಅಲ್ತಾಫ್ ಖಾನ್ ಅವರು, ಲೋಕಸಭೆ ಚುನಾವಣೆಯಲ್ಲಿ ನಮ್ಮವರೇ ಕಾಂಗ್ರೆಸ್‍ಗೆ ಮತ ಹಾಕಿಲ್ಲ. ಹೀಗಾಗಿ ಮೈತ್ರಿ ಅಭ್ಯರ್ಥಿ ಸೋತರು. ಚಾಮರಾಜಪೇಟೆ ಕ್ಷೇತ್ರದಲ್ಲಿ ನಮ್ಮವರೇ ಕಾಂಗ್ರೆಸ್ ಪರವಾಗಿ ನಿಂತಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

ಅಲ್ತಾಫ್ ಖಾನ್ ಅವರ ಮಾತಿಗೆ ತಿರುಗಿಬಿದ್ದ ಕಾರ್ಯಕರ್ತರು, ನೇರವಾಗಿ ಕಿಡಿಕಾರಿದರು. ಅಷ್ಟೇ ಅಲ್ಲದೆ ಭಾಷಣ ನಿಲ್ಲಿಸುವಂತೆ ಕೂಗಿದರು. ತಕ್ಷಣವೇ ವೇದಿಕೆ ಮೇಲಿದ್ದ ನಾಯಕರು ಅಲ್ತಾಫ್ ಅವರಿಗೆ ಕುಳಿತುಕೊಳ್ಳಲು ಸೂಚನೆ ನೀಡಿದರು. ಇತ್ತ ಎಚ್.ಡಿ.ದೇವೇಗೌಡ ಅವರು ಎಲ್ಲವನ್ನೂ ಮೌನವಾಗಿ ಕುಳಿತು ನೋಡಿದರು.

ಈ ಘಟನೆಯಿಂದಾಗಿ ಮುಜುಗುರಕ್ಕೆ ಒಳಗಾದ ಜೆಡಿಎಸ್ ಮುಖಂಡರು ತಕ್ಷಣವೇ ಮಾಧ್ಯಮದವರನ್ನು ಹೊರಗೆ ಕಳುಹಿಸಿದರು. ವೇದಿಕೆಯ ಮೇಲೆ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಮಾಜಿ ಶಾಸಕ ಮಧು ಬಂಗಾರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ ಸೇರಿಂದತೆ ಪ್ರಮುಖರು ಉಪಸ್ಥಿತರಿದ್ದರು.

ಸಭೆ ಬಳಿಕ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರದಂತೆ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 37 ಸ್ಥಾನ ಮಾತ್ರ ಬಂತು. ಆದರೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸಿಎಂಗೆ ಅವಕಾಶ ನೀಡಿದರು. ಕಾಂಗ್ರೆಸ್ ಹಿರಿಯ ನಾಯಕರು ಸಮ್ಮುಖದಲ್ಲಿ ಈ ತೀರ್ಮಾನ ಆಯಿತು. ಹೀಗಾಗಿ ಸರ್ಕಾರ ರಚನೆಗೊಂಡು ಒಂದು ವರ್ಷ ಪೂರೈಸಿದೆ ಎಂದು ಹೇಳಿದರು.

ಇಬ್ಬರು ರಾಜೀನಾಮೆ ಕೊಟ್ಟರು. ಮತ್ತೆ ಐದಾರು ಶಾಸಕರು ಹೋಗುತ್ತಾರೆ ಅಂತ ಮಾತನಾಡುತ್ತಿದ್ದಾರೆ. ಸಿಎಂ ಅಮೆರಿಕದಲ್ಲಿ ಇದ್ದುಕೊಂಡು ಎಲ್ಲರನ್ನೂ ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಅವರು ಕೂಡ ಎಲ್ಲವನ್ನೂ ಸರಿಪಡಿಸುತ್ತಿದ್ದಾರೆ ಎಂದು ತಿಳಿಸಿದರು.

ಎರಡು-ಮೂರು ದಿನಗಳಲ್ಲಿ ಅಲ್ಪಸಂಖ್ಯಾತ ಘಟಕಗಳ ನೇಮಕ ಮಾಡುತ್ತೇವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮನಸ್ಸಿಗೆ ನೋವಾಗಿರಬಹುದು. ಅವರಲ್ಲಿ ಫೈಟಿಂಗ್ ನೇಚರ್ ಇತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಹೆಚ್ಚು ಪ್ರಚಾರ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಹಲವಾರು ವಿಷಯಗಳನ್ನು ಎತ್ತಿಕೊಂಡು ಹೋರಾಟ ಮಾಡಿದರು. ಆದರೆ ಜನ ಮೋದಿ ಅವರಿಗೆ ಆಶೀರ್ವಾದ ಮಾಡಿದರು ಎಂದರು.

ಪಿರಿಯಾಪಟ್ಟಣ ಶಾಸಕರಿಗೆ ಹಣದ ಆಮಿಷ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಅವರು, ಇಂತಹ ವಿಚಾರದ ಬಗ್ಗೆ ನನಗೆ ಏನು ಕೇಳಬೇಡಿ. ಇಂತಹದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *