ನಾಳೆ ಜನತಾ ಕರ್ಫ್ಯೂ ಆಚರಣೆಗೆ ಸಿಎಂ ಮನವಿ

Public TV
2 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದೇಶಾದ್ಯಂತ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ನಾಳೆಯ ಜನತಾ ಕರ್ಫ್ಯೂ ಹೇಗೆ ಆಚರಿಸಬೇಕು, ಏನೆಲ್ಲ ಮಾಡಬೇಕು ಮತ್ತು ಏನೆಲ್ಲ ಮಾಡಬಾರದು ಅಂತ ಖುದ್ದು ಸಿಎಂ ಯಡಿಯೂರಪ್ಪನವರೇ ರಾಜ್ಯದ ಜನತೆಗೆ ತಿಳಿಸಿದ್ದಾರೆ. ಜನತಾ ಕರ್ಫ್ಯೂಗೆ ಮುನ್ನಾದಿನವಾದ ಇಂದು ಸಿಎಂ ಯಡಿಯೂರಪ್ಪ ಪತ್ರಿಕಾ ಪ್ರಕಟಣೆ ಹೊರಡಿಸಿ ಜನತಾ ಕರ್ಫ್ಯೂ ಆಚರಣೆ ಕುರಿತು ವಿವರ ಕೊಟ್ಟಿದ್ದಾರೆ.

ಸಿಎಂ ಜನತೆಗೆ ಮನವಿ: ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವಂತೆ ನಾಳೆ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ಜನತಾ ಕರ್ಫ್ಯೂ ಆಚರಣೆಗೆ ನಿಮ್ಮೆಲ್ಲರ ಬೆಂಬಲ ಅತಿ ಅಗತ್ಯವಾಗಿದೆ. ನಾಳೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ನಾವೆಲ್ಲರೂ ಮನೆಯಲ್ಲಿ ಉಳಿದು ನಿಜವಾದ ಅರ್ಥದಲ್ಲಿ ಕರ್ಫ್ಯೂವನ್ನು ಬೆಂಬಲಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಾಡಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ”ಕರ್ನಾಟಕ ರಾಜ್ಯವು ದೇಶದಲ್ಲಿ ಕೊವಿಡ್-19 ವೈರಾಣು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಇದೆಲ್ಲದಕ್ಕೂ ರಾಜ್ಯದ 6.5 ಕೋಟಿ ಜನರ ನೈತಿಕ ಮತ್ತು ಸಾಂಘಿಕ ಬೆಂಬಲ ಕಾರಣ. ಈ ಸಮಯದಲ್ಲಿ ನನ್ನ ಕಳಕಳಿಯ ಮನವಿಯೆಂದರೆ ರಾತ್ರಿ 9.00 ಗಂಟೆಯ ನಂತರ ಕರ್ಫ್ಯೂ ಅವಧಿ ಮುಗಿದಿದೆ ಎಂದು ಎಲ್ಲರೂ ಮನೆಯ ಹೊರಗಡೆ ಬಂದು ಸಂಭ್ರಮಿಸುವುದಾಗಲೀ ಅಥವಾ ನಿಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸುವುದಾಗಲೀ ಮಾಡಬೇಡಿ. ಇದು ಬೆಳಗ್ಗೆಯಿಂದ ಆಚರಿಸಿದ ರೋಗ ತಡೆಯುವ ಕ್ರಮವಾದ ಕರ್ಫ್ಯೂವನ್ನು ಅರ್ಥರಹಿತವಾಗಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ನಿಮಗೆ 9 ಗಂಟೆಯಿಂದ ಮನೆ ಹೊರಗಡೆ ಬರದೆ ಮನೆಯವರೆಲ್ಲರೂ ಆಪ್ತರೊಂದಿಗೆ ಕಾಲ ಕಳೆಯಲು ಮನವಿ ಮಾಡಿರುತ್ತಾರೆ. ಆವಾಗ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯ ಕರ್ಪೂಗೆ ಒಂದು ಅರ್ಥ ಬರುತ್ತದೆ ಮತ್ತು ಸಾರ್ಥಕವಾಗಲಿದೆ. ಇನ್ನೊಮ್ಮೆ ನನ್ನ ಕಳಕಳಿಯ ಮನವಿ ನೀವು ಯಾರೂ ರಾತ್ರಿ 9 ಗಂಟೆಯ ನಂತರ ಹೊರಗೆ ಬರಬೇಡಿ. ಆದರೆ ಸಂಜೆ 5 ಗಂಟೆಗೆ ನಿಮ್ಮ ಮನೆಯ ಕಿಟಕಿಗಳಿಂದ ಮತ್ತು ಛಾವಣಿಗಳ ಮೇಲಿಂದ ಚಪ್ಪಾಳೆ ತಟ್ಟಿ ಸರ್ಕಾರದ ಮತ್ತು ರೋಗ ತಡೆಯುವಲ್ಲಿ ಭಾಗಿಯಾಗಿರುವ ಜನರಿಗೆ ನೈತಿಕ ಬೆಂಬಲ ಸೂಚಿಸಲು ಮಾತ್ರ ಮರೆಯಬೇಡಿ” ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *