ಜಗ್ಗಿ ಮದ್ವೆಯಾದಾಗ ಇಷ್ಟು ದೊಡ್ಡ ಪರಿವಾರ ಸಿಗುತ್ತದೆ ಎಂದು ನೆನೆಸಿರಲಿಲ್ಲ: ಪರಿಮಳ ಜಗ್ಗೇಶ್

Public TV
2 Min Read

ಬೆಂಗಳೂರು: 1984ರಲ್ಲಿ ಜಗ್ಗಿಯನ್ನು ಮದ್ವೆಯಾದಾಗ ಇಷ್ಟು ದೊಡ್ಡ ಪರಿವಾರ ಸಿಗುತ್ತದೆ ಎಂದು ನೆನೆಸಿರಲಿಲ್ಲ ಎಂದು ನವರಸ ನಾಯಕ ಜಗ್ಗೇಶ್ ಅವರು ಪತ್ನಿ ಪರಿಮಳ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.

ಜಗ್ಗೇಶ್ ದಂಪತಿಗೆ ಇಂದು ಸುದಿನ, ಯಾಕೆಂದರೆ ಹಲವಾರು ಅಡೆತಡೆಗಳ ಮಧ್ಯೆ ಜಗ್ಗೇಶ್ ಹಾಗೂ ಪರಿಮಳ ಅವರು ಮದುವೆಯಾಗಿ ಇಂದಿಗೆ 36 ವರ್ಷಗಳಾಗಿವೆ. ಮನೆಯವರ ವಿರೋಧದ ನಡುವೆಯೂ ಜಗ್ಗೇಶ್ ಅವರು ಪ್ರೀತಿಸಿ ಮದುವೆಯಾಗಿ ಇಂದಿಗೆ 36ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಅಚರಿಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿಯೇ ಪರಿಮಳ ಅವರು, ಈ ರೀತಿ ಟ್ವೀಟ್ ಮಾಡಿದ್ದಾರೆ.

ಜಗ್ಗೇಶ್ ಅವರ ಮದುವೆ ನಡೆದಿದ್ದೆ ಒಂದು ರೋಚಕ ಘಟನೆ. 1984 ಮಾರ್ಚ್ 22 ರಂದು ಜಗ್ಗೇಶ್ ದಂಪತಿಯ ಮದುವೆ ನಡೆದಿತ್ತು. ಹಾಗೇ ನೋಡುವುದಾದರೆ ಮದುವೆಯಾದ ಜಗ್ಗೇಶ್ ಅವರಿಗೆ 19 ವರ್ಷ ಆಗಿದ್ದರೆ ಪರಿಮಳ ಅವರಿಗೆ 14 ವರ್ಷ. ಜಗ್ಗೇಶ್ ಮೊದಲ ವರ್ಷದ ಡಿಗ್ರಿ ಓದುತ್ತಿದ್ದರೆ, ಪರಿಮಳ ಅವರು ಆಗ ತಾನೇ 9ನೇ ತರಗತಿಯಲ್ಲಿ ಓದುತ್ತಿದ್ದರು.

ಅಂದು ಒಬ್ಬರನ್ನು ಒಬ್ಬರು ಬಿಟ್ಟಿರಲಾರದ ಮಟ್ಟಕ್ಕೆ ಪ್ರೀತಿ ಮಾಡುತ್ತಿದ್ದ ಈ ಜೋಡಿ ಮನೆಯವರ ವಿರೋಧದ ನಡುವೆ ರಿಜಿಸ್ಟರ್ ಆಫೀಸ್‍ನಲ್ಲಿ ಮದುವೆಯಾಗಿತ್ತು. ಮಗಳು ಚಿಕ್ಕವಳು ಎಂಬ ಕಾರಣಕ್ಕೆ ಈ ಮದುವೆಗೆ ಪರಿಮಳ ಅವರ ಕುಟುಂಬದವರು ಒಪ್ಪಿರಲಿಲ್ಲ. ಆದರೆ ಪರಿಮಳ ಅವರನ್ನು ಹುಚ್ಚನಂತೆ ಪ್ರೀತಿ ಮಾಡುತ್ತಿದ್ದ ಜಗ್ಗೇಶ್ ಅವರು ಅಂದು ಅವರನ್ನು ಬಿಟ್ಟುಕೊಟ್ಟಿರಲಿಲ್ಲ. ವಿರೋಧದ ನಡುವೆ ಮದುವೆಯಾಗಿ ಸುಪ್ರೀಂ ಕೋರ್ಟಿನಲ್ಲಿ ಹೋರಾಡಿ ಪರಿಮಳ ಅವರನ್ನು ಪಡೆದುಕೊಂಡಿದ್ದರು.

ಜಗ್ಗೇಶ್ ಹಾಗೂ ಪರಿಮಳ ಅವರು ಮದುವೆಯಾದಾಗ ಇನ್ನೂ ಮೈನರ್ ಆಗಿದ್ದ ಕಾರಣ, ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದು ಪರಿಮಳ ಕುಟುಂಬದವರು ಜಗ್ಗೇಶ್ ಅವರ ಮೇಲೆ ಅಪಹರಣ ಕೇಸ್ ಬುಕ್ ಮಾಡಿದ್ದರು. ಅಷ್ಟೋತ್ತಿಗೆ ಕೆಲ ಸಿನಿಮಾಗಳಲ್ಲಿ ಜಗ್ಗೇಶ್ ಅಭಿನಿಸಿದ್ದ ಕಾರಣ ಚಿತ್ರನಟನೋರ್ವ ಯುವತಿಯನ್ನು ಅಪಹರಿಸಿದ್ದಾನೆ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು.

ಈ ಇಲ್ಲದರ ನಡುವೆ ಅವರ ಮದುವೆ ಕೇಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಅಂದಿನ ನ್ಯಾಯಾಧೀಶರು ಜಗ್ಗೇಶ್ ಮತ್ತು ಪರಿಮಳ ಅವರು ಪ್ರೀತಿಗೆ ಬೆಲೆಕೊಟ್ಟು, ಮಾನವೀಯತೆಯ ಅಧಾರದ ಮೇಲೆ ಪ್ರೇಮಿಗಳ ಪರವಾಗಿ ತೀರ್ಪು ನೀಡಿದ್ದರು. ಅಂದು ಅಲ್ಲೇ ಜೀವನದಲ್ಲಿ ಇಬ್ಬರು ಒಟ್ಟಿಗೆ ಚೆನ್ನಾಗಿ ಬದುಕಬೇಕು ಎಂದು ತೀರ್ಮಾನಿಸಿದ ಜಗ್ಗೇಶ್ ದಂಪತಿ ಇಂದು ಮಾದರಿ ಜೋಡಿಯಾಗಿ ಬಾಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *