ಕೊರೊನಾ ವಿರುದ್ಧದ ಹೋರಾಟದಲ್ಲಿ ಮೋದಿಗೆ ನನ್ನ ಬೆಂಬಲವಿದೆ: ಹೆಚ್‍ಡಿಡಿ

Public TV
2 Min Read

– ಮಾಜಿ ಪ್ರಧಾನಿ ಕರೆ ಮಾಡಿ ಬೆಂಬಲ ಕೋರಿದ ಮೋದಿ

ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಟ್ವೀಟ್ ಮಾಡಿದ್ದಾರೆ.

ಕೊರೊನಾ ವೈರಸ್ ನಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಜೊತೆಗೆ ಇಂದು ದೇಶದ ಹಲವಾರು ನಾಯಕರಿಗೆ ಕರೆ ಮಾಡಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಬೆಂಬಲ ಸೂಚಿಸುವಂತೆ ಕೋರುತ್ತಿದ್ದಾರೆ. ಅಂತಯೇ ದೇವೇಗೌಡರಿಗೂ ಕರೆ ಮಾಡಿದ್ದು, ನಾನು ಬೆಂಬಲ ಸೂಚಿಸುವುದಾಗಿ ಹೆಚ್‍ಡಿಡಿ ಹೇಳಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ದೇವೇಗೌಡರು, ಕೊರೊನಾ ವೈರಸ್ ಪರಿಣಾಮದಿಂದ ದೇಶದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಇಂದು ನನಗೆ ಪ್ರಧಾನಿ ಮೋದಿ ಅವರು ಕರೆ ಮಾಡಿದ್ದರು. ಮಾನ್ಯ ಪ್ರಧಾನಿ ನನ್ನ ಆಡಳಿತಾತ್ಮಕ ಅನುಭವವನ್ನು ಶ್ಲಾಘಿಸಿದರು ಮತ್ತು ನನ್ನ ಬೆಂಬಲವನ್ನು ಕೋರಿದರು. ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ರಾಷ್ಟ್ರದ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಹೆಚ್‍ಡಿಡಿ, ಕೊರೊನಾದಿಂದಾಗಿ ವಿಶ್ವಾದ್ಯಂತ ಸಾವಿರಾರು ಜನರು ಸಾಯುತ್ತಿದ್ದಾರೆ. ಕೊರೊನಾ ವೈರಸ್ ವಿರುದ್ಧದ ನಮ್ಮ ಹೋರಾಟದಲ್ಲಿ ಭಾರತಕ್ಕೆ ಮುಂಬರುವ ವಾರಗಳು ನಿರ್ಣಾಯಕ. ಮಾಜಿ ಪ್ರಧಾನಮಂತ್ರಿಯಾಗಿ ನಾನು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಹಕರಿಸಲು ಒಪ್ಪಿದ್ದೇನೆ. ಅದು ನಮ್ಮ ದೇಶವನ್ನು ಮಾತ್ರವಲ್ಲದೆ ಇಡೀ ಜಗತ್ತನ್ನು ಧ್ವಂಸ ಮಾಡಿದೆ ಎಂದು ದೇವೇಗೌಡರು ಹೇಳಿದ್ದಾರೆ.

ಕೊರೊನಾ ವೈರಸ್ ತಡೆಗಟ್ಟಲು ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೂ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಹಾಗಾಗಿ ಮೋದಿ ಅವರು ಇಂದು ದೇಶದ ಪರಿಸ್ಥಿತಿಯ ಕುರಿತು ಚರ್ಚೆ ಮಾಡಲು ದೇಶದ ಹಲವು ರಾಜಕೀಯ ನಾಯಕರಿಗೆ ಕರೆ ಮಾಡಿದ್ದಾರೆ. ಇಂದು ಇಬ್ಬರು ಮಾಜಿ ರಾಷ್ಟ್ರಪತಿಗಳಾದ, ಪ್ರಣಬ್ ಮುಖರ್ಜಿ ಮತ್ತು ಪ್ರತಿಭಾ ಪಾಟೀಲ್ ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಮತ್ತು ಹೆಚ್.ಡಿ.ದೇವೇಗೌಡ ಸೇರಿದಂತೆ ದೇಶದ ಎಲ್ಲ ಹಿರಿಯ ನಾಯಕರಿಗೂ ಕರೆ ಮಾಡಿ ಮಾತನಾಡಿದ್ದಾರೆ.

ಇವರ ಜೊತೆಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಒಡಿಶಾದ ನವೀನ್ ಪಟ್ನಾಯಕ್, ದಕ್ಷಿಣ ಭಾರತದ ನಾಯಕರಾದ ಕೆಸಿಆರ್, ಎಂ.ಕೆ.ಸ್ಟಾಲಿನ್, ಮತ್ತು ಮಿತ್ರ ಪ್ರಕಾಶ್ ಸಿಂಗ್ ಬಾದಲ್ ಅವರಿಗೂ ಕರೆ ಮಾಡಿ ಬಗ್ಗೆ ಚರ್ಚೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *