ಬೆಂಗ್ಳೂರು ಹಜ್ ಭವನ ಕಾಮಗಾರಿಗೆ 5 ಕೋಟಿ ರೂ. ಘೋಷಿಸಿದ ಸಿಎಂ

Public TV
1 Min Read

ಬೆಂಗಳೂರು: ಸದ್ಯ ನಮ್ಮ ರಾಜ್ಯವೂ ಸೇರಿದಂತೆ ದೇಶದೆಲ್ಲೆಡೆ ಪೌರತ್ವ ಕಾಯ್ದೆ(ಸಿಎಎ) ಪರ – ವಿರೋಧ ಸಂಘರ್ಷ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಂಗಳೂರಿನ ಹಜ್ ಭವನಕ್ಕೆ 5 ಕೋಟಿ ರೂ ಅನುದಾನ ಘೋಷಿಸುವ ಮೂಲಕ ರಾಜ್ಯದ ಮುಸ್ಲಿಮರಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ.

ಬೆಂಗಳೂರಿನ ಹೆಗ್ಡೆನಗರದಲ್ಲಿರುವ ಹಜ್ ಭವನದಲ್ಲಿ ಇಂದು ಹಜ್ ಯಾತ್ರೆ-2020ಕ್ಕೆ ಆನ್ ಲೈನ್ ಮೂಲಕ ಯಾತ್ರಿಕರನ್ನು ಆಯ್ಕೆ ಮಾಡುವ ಕಾರ್ಯಕ್ರಮ ಇತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಬಿ.ಎಸ್ ಯಡಿಯೂರಪ್ಪ ಹಜ್ ಭವನದ ಕನ್ವೆನ್ಷನ್ ಸೆಂಟರ್ ಕಾಮಗಾರಿಗೆ ಸ್ಥಳದಲ್ಲೇ 5 ಕೋಟಿ ರೂ. ಅನುದಾನ ಕೊಡುವುದಾಗಿ ಘೋಷಿಸಿದರು.

ಅಷ್ಟೇ ಅಲ್ಲ ರಾಜ್ಯದ ಯಾತ್ರಿಕರು ಕಲಬುರಗಿ ವಿಮಾನ ನಿಲ್ದಾಣದಿಂದಲೇ ನೇರವಾಗಿ ಮೆಕ್ಕಾಗೆ ತೆರಳುವ ವ್ಯವಸ್ಥೆ ಜಾರಿ ಕುರಿತು ಕೇಂದ್ರದ ವಿಮಾನಯಾನ ಸಚಿವಾಲಯದ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ಕೊಟ್ಟರು. ಸದ್ಯ ಕಲಬುರಗಿ, ಯಾದಗಿರಿ, ಬೀದರ್, ಬಾಗಲಕೊಟೆಯ ಹಜ್ ಯಾತ್ರಿಕರು ಮೊದಲು ಹೈದರಾಬಾದ್‍ಗೆ ಹೋಗಿ ಅಲ್ಲಿಂದ ಮೆಕ್ಕಾಗೆ ಹೋಗುತ್ತಿದ್ದು, ಮೂರ್ನಾಲ್ಕು ಗಂಟೆ ತಡವಾಗುತ್ತಿದೆ. ಈ ಎರಡೂ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಯಕ್ರಮದಲ್ಲಿದ್ದ ಅನರ್ಹ ಶಾಸಕ ಆರ್.ರೋಷನ್ ಬೇಗ್ ಸಿಎಂ ಬಳಿ ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಸಿಎಎ ಕಾಯ್ದೆ ಬಗ್ಗೆಯೂ ನೆರೆದಿದ್ದ ಮುಸ್ಲಿಮರಿಗೆ ಸಿಎಂ ಮನವರಿಕೆ ಮಾಡಿಕೊಟ್ಟರು. ಸಿಎಎ ಕಾಯ್ದೆಯಿಂದ ರಾಜ್ಯದ ಮುಸಲ್ಮಾನರಿಗೆ ಸಮಸ್ಯೆ ಆಗಲ್ಲ. ಹಾಗೊಂದು ವೇಳೆ ಕಾಯ್ದೆಯಿಂದ ಯಾವೊಬ್ಬ ಮುಸ್ಲಿಮನಿಗೆ ಸಮಸ್ಯೆ ಆದರೆ ಅದಕ್ಕೆ ತಾವೇ ಜವಾಬ್ದಾರರು. ಸಿಎಎ ಕಾಯ್ದೆ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *