ಇವ್ರ ಕೆಟ್ಟ ರಾಜಕಾರಣಕ್ಕೆ ನಾನು ಭಾಗಿಯಾಗಲ್ಲ: ಎಚ್‍ಡಿಡಿ

Public TV
2 Min Read

– ಜವರಾಯಿಗೌಡ ಕಾಂಗ್ರೆಸ್‍ಗೆ ಹೋಗಲ್ಲ

ಬೆಂಗಳೂರು: ಮಾಜಿ ಸಚಿವ ಸಾರಾ ಮಹೇಶ್ ಹಾಗೂ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರ ಕೆಟ್ಟ ರಾಜಕಾರಣಕ್ಕೆ ನಾನು ಭಾಗಿಯಾಗಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಸಮಾಧಾನ ಹೊರ ಹಾಕಿದ್ದಾರೆ.

ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್.ವಿಶ್ವನಾಥ್ ಮತ್ತು ಸಾರಾ ಮಹೇಶ್ ಮಾತುಗಳನ್ನು ರಾಜ್ಯದ ಜನ ಕೇಳಿದ್ದಾರೆ. ಸಾರಾ ಮಹೇಶ್ ರಾಜೀನಾಮೆ ನೀಡಿದ್ದು ಸತ್ಯ. ಅವರು ಸ್ಪೀಕರ್ ಸೆಕ್ರೆಟರಿಗೆ ರಾಜೀನಾಮೆ ಪತ್ರ ಕೊಟ್ಟಿದ್ದಾರೆ. ಆದರೆ ಸ್ಪೀಕರ್ ಈ ಪಂಥಾಹ್ವಾನ ಯಾಕೆ ಅಂತ ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ವಾಪಸ್ ಪಡೆಯುತ್ತೇನೆ ಅಂತ ಸಾರಾ ಮಹೇಶ್ ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ವಿಶ್ವನಾಥ್, ಮಹೇಶ್ ವಾರ್- ನಾಳೆ ಬೆಳಗ್ಗೆ 9ಕ್ಕೆ ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ

ಒಬ್ಬರು ಚಾಮುಂಡಿಬೆಟ್ಟಕ್ಕೆ ಬನ್ನಿ ಅಂತ ಹೇಳುತ್ತಾರೆ. ಇನ್ನೊಬ್ಬರು ಅದರ ಅವಶ್ಯಕತೆ ಇಲ್ಲ ಎನ್ನುತ್ತಾರೆ. ನಾನು ಎಚ್.ವಿಶ್ವನಾಥ್ ಬಗ್ಗೆ ಮಾತನಾಡುವುದಿಲ್ಲ. ಆಣೆ-ಸತ್ಯ-ಪ್ರಮಾಣ ಇವೆಲ್ಲ ಯಾಕೆ ಬೇಕು? ಆವೇಶದಿಂದ ಎಲ್ಲರೂ ಮಾತನಾಡುತ್ತಾರೆ. ಇದರಿಂದ ಏನು ಪ್ರಯೋಜನವಾಗುತ್ತದೆ? ಸಾರಾ ಮಹೇಶ್ ಜೊತೆ ಮಾತನಾಡಿದ್ದೇನೆ. ಬುಧವಾರ ಅವರು ರಾಜೀನಾಮೆ ವಾಪಸ್ ಪಡೆಯುತ್ತಾರೆ ಎಂದು ಸ್ಪಷ್ಟನೆ ನೀಡಿದರು.

ವಿಧಾನ ಪರಿಷತ್‍ನ 4 ಪದವೀಧರ ಕ್ಷೇತ್ರಗಳ ಚುನಾವಣೆ ಜೂನ್‍ನಲ್ಲಿ ನಡೆಯುತ್ತದೆ. ನಮ್ಮ ಅಭ್ಯರ್ಥಿಗಳ ಸಭೆಯನ್ನು 18ರಂದು ಕರೆದಿದ್ದೇನೆ. ಅಭ್ಯರ್ಥಿಗಳು, ಮಾಜಿ, ಹಾಲಿ ಶಾಕರಿಗೆ ಪತ್ರ ಬರೆದು, ಸಭೆಗೆ ಆಹ್ವಾನ ನೀಡಿದ್ದೇನೆ. ಎಲ್ಲರ ಜೊತೆಗೆ ಸಮಾಲೋಚನೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

ಪಕ್ಷದ ಮುಖಂಡ ಜವರಾಯಿಗೌಡ ಕಾಂಗ್ರೆಸ್‍ಗೆ ಹೋಗುವುದಿಲ್ಲ. ಎಲ್ಲಾ ಕಡೆ ತಪ್ಪು ಸುದ್ದಿ ಹರಡಿಸಲಾಗುತ್ತದೆ. ಕ್ಷೇತ್ರದ ಪಟ್ಟಭದ್ರ ಹಿತಾಸಕ್ತಿಗಳು ಸುಮ್ಮನೆ ಈ ಸುದ್ದಿ ಹರಡಿಸುತ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಈ ಬಾರಿ ಕಾರ್ಯಕರ್ತರು ಅವರಿಗಾಗಿಯೇ ದುಡಿಯುತ್ತಾರೆ ಎಂದು ಸ್ಪಷ್ಟನೆ ನೀಡಿದರು.

ಅನರ್ಹ ಶಾಸಕರ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂದ ಮೇಲೆ 17 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿ ಹಾಕುತ್ತೇವೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ಮುಖಂಡರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್ ಸ್ಪರ್ಧೆ ಮಾಡುತ್ತೆ ಅಂತ ಕೆಲವರು ಹೇಳುತ್ತಿದ್ದಾರೆ. ಆದರೆ ಎಲ್ಲಾ ಕ್ಷೇತ್ರದಲ್ಲಿ ನಾವು ಸ್ಪರ್ಧೆ ಮಾಡುತ್ತೇವೆ. ಯುವಕರು ನಾವು ಸ್ಪರ್ಧೆ ಮಾಡುತ್ತೇವೆ ಅಂತ ಮುಂದೆ ಬರುತ್ತಿದ್ದಾರೆ. ಹೀಗಾಗಿ 17 ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕುತ್ತೇವೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *