ನನ್ನ ಜೀನ್ ಈ ಮಣ್ಣಿನಲ್ಲಿದೆ: ಹೆಚ್‍ಡಿಕೆ

Public TV
2 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿಯವರ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಮ ಜೀನ್‍ಗಳು ಪಾಕಿಸ್ತಾನದಲ್ಲಿರಬಹುದು ಅಥವಾ ಜರ್ಮನಿಯ ನಾಜಿಗಳಲ್ಲಿರಬಹುದು. ಆದರೆ ನನ್ನ ಜೀನ್ ಈ ಮಣ್ಣಿನಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಿಜಗುಣಾನಂದ ಶ್ರೀ, ಹೆಚ್‍ಡಿಕೆ ಸೇರಿ 15 ಮಂದಿಯ ಹತ್ಯೆ ಬೆದರಿಕೆ ಪತ್ರದ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಎಲ್ಲರೊಳಗೊಂದಾಗು ಮಂಕುತಿಮ್ಮ ನನ್ನನ್ನು ಅಪಮಾನಿಸುತ್ತಿರುವ ಬಿಜೆಪಿಗರೇ ಎಚ್ಚರ. ನಿಮ್ಮ ಜೀನ್‍ಗಳು ಪಾಕಿಸ್ತಾನದಲ್ಲಿರಬಹುದು. ಅಥವಾ ಜರ್ಮನಿಯ ನಾಜಿಗಳಲ್ಲಿರಬಹುದು. ನನ್ನ ಜೀನ್ ಈ ಮಣ್ಣಿನಲ್ಲಿದೆ. ನನ್ನನ್ನು ಕೊಲ್ಲಲೆತ್ನಿಸುವವರು ನವ ಉಗ್ರರು. ಅಪಮಾನಿಸಲು ಯತ್ನಿಸುತ್ತಿರುವವರು ಒಕ್ಕಲಿಗ ಅಸ್ಮಿತೆಯ ವಿರೋಧಿಗಳು ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, ಸಮಾಜದ ಶಾಂತಿಗಾಗಿ ಹೋರಾಡಿದ್ದಕ್ಕೆ ನನ್ನನ್ನು ಕೊಲ್ಲುವ ಸಂಚು ನಡೆಯುತ್ತಿದೆಯಂತೆ. ನನ್ನನ್ನು ಕೊಲ್ಲಿಸುವ ಕೆಲಸಕ್ಕೆ ಕೈಹಾಕಿದವರೇ ಒಂದು ವಿಚಾರ ತಿಳಿದುಕೊಳ್ಳಿ. ನನ್ನಂತೆ ಹೋರಾಡಬಲ್ಲ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳ ಪಡೆ ನನ್ನ ಬೆನ್ನಿಗಿದೆ. ನನ್ನನ್ನು ಕೊಲ್ಲಬಹುದು. ಆದರೆ ನನ್ನ ಬೆನ್ನಿಗೆ ನಿಂತವರನ್ನು ಕೊಲ್ಲಲಾದೀತೆ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ಇದೇ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ನಾನು ನಡೆಸುತ್ತಿರುವ ಹೋರಾಟಕ್ಕೆ ಬೆದರಿರುವ ಬಿಜೆಪಿ ನನ್ನನ್ನು ‘ಪಾಕಿಸ್ತಾನಿ’ ಎಂದು ಕರೆದು ಅಪಮಾನಿಸುವ ಪ್ರಯತ್ನ ಮಾಡುತ್ತಿದೆ. ಕೊಲ್ಲಲು ಬಂದವರದ್ದು ಬೆದರಿಕೆಯ ‘ಉಗ್ರ’ ತಂತ್ರವಾದರೆ, ಅವರದ್ದೇ ಸಿದ್ಧಾಂತ ಪ್ರತಿಪಾದಿಸುತ್ತಿರುವ ಬಿಜೆಪಿಯದ್ದು ಅಪಮಾನದ ತಂತ್ರವಾಗಿದೆ.

ಕರ್ನಾಟಕದಲ್ಲಿ ಒಕ್ಕಲಿಗ ನಾಯಕತ್ವದ ವಿರುದ್ಧ ಹಿಂದಿನಿಂದಲೂ ದೌರ್ಜನ್ಯ ರಾಜಕಾರಣ ಇದ್ದದ್ದೇ. ಮೂದಲಿಸುವುದು, ಸಲ್ಲದ ಆರೋಪ ಮಾಡುವುದು. ಈ ಹಿಂದೆ ನಡೆದ ತಂತ್ರಗಳು. ಆದರೆ ಈಗಿನ ಕೊಲ್ಲುವ ಸಂಚು, ಪಾಕಿಸ್ತಾನಿ ಪ್ರಯೋಗ ಒಕ್ಕಲಿಗ ರಾಜಕಾರಣದ ವಿರುದ್ಧ ನಡೆಯುತ್ತಿರುವ ಮತ್ತೊಂದು ಬಗೆಯ ದೌರ್ಜನ್ಯ.

ಒಕ್ಕಲಿಗರು ಹೋರಾಟಕ್ಕಿಳಿದರೆ, ಅಧಿಕಾರಕ್ಕೆ ಬಂದರೆ ಅವರನ್ನು ಬೆದರಿಸುವ, ಸರ್ಕಾರಗಳನ್ನು ಬೀಳಿಸುವ ಕಾಯಕ ಹಿಂದಿನಿಂದ ನಡೆದುಕೊಂಡು ಬಂದಿದೆ. ದೇವೇಗೌಡರಂಥವರ ಮೇಲೆ ಹಲ್ಲೆ ಪ್ರಯತ್ನಗಳು ನಡೆದಿವೆ. ಅವರಿಗೆ ಅಧಿಕಾರ ವಂಚಿಸಲು ಯತ್ನಿಸಿದ್ದನ್ನು ಸಮಾಜ ನೋಡಿದೆ. ಈಗ ಈ ಶಕ್ತಿಗಳು ನನ್ನ ವಿರುದ್ಧ ನಿಂತಿವೆ. ಇದಕ್ಕೆ ಬೆದರುವ ವ್ಯಕ್ತಿ ನಾನಲ್ಲ.

“ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗತ್ತು” ಎಂಬ ಕವಿವಾಣಿ ನೆನಪಿರಲಿ. ಅವರ ಪ್ರತಿನಿಧಿ ನಾನು. ರೈತರಿಗಾಗಿ ಕಾರ್ಯಕ್ರಮ ಹಮ್ಮಿಕೊಂಡವ ನಾನು. ನೀವು ನನ್ನನ್ನು ಕೊಲ್ಲಲಾದೀತೇ? ನನ್ನನ್ನು ಪಾಕಿಸ್ತಾನಿ ಎನ್ನುವಿರೇ? ಮುಂದೊಂದು ದಿನ ಪ್ರಾಯಶ್ಚಿತ ಪಡಲೆಂದೇ ಇಂದು ನೀವು ಮಾಡಿಕೊಳ್ಳುತ್ತಿರುವ ಪಾಪಗಳಿವು ಎಂದು ಸರಣಿ ಟ್ವೀಟ್ ಗಳ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕೊಲೆ ಬೆದರಿಕೆ:
ನಿಜಗುಣಾನಂದ ಶ್ರೀ ಸೇರಿ ಅನೇಕ ಪ್ರಗತಿಪರರ ಹತ್ಯೆಗೆ ಜನವರಿ 29 ರಿಂದ ಹತ್ಯೆ ಮೂಹರ್ತ ನಿಗದಿ ಮಾಡಿರೋ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿತ್ತು. ನಿಜಗುಣಾನಂದ ಸೇರಿ 15 ಜನರಿಗೆ ಹತ್ಯೆ ಬೆದರಿಕೆ ಹಾಕಲಾಗಿದೆ. ಪತ್ರದಲ್ಲಿ ನಿಜಗುಣಾನಂದ ಸ್ವಾಮಿಜಿ, ಮಹೇಂದ್ರ ಕುಮಾರ್, ನಿಡುಮಾಮುಡಿ ಚನ್ನಮಲ್ಲ ಸ್ವಾಮಿಜಿ, ಚಿತ್ರ ನಟ ಪ್ರಕಾಶ ರಾಜ್, ಜ್ಞಾನ ಪ್ರಕಾಶ ಸ್ವಾಮಿಜಿ, ನಟ ಚೇತನಕುಮಾರ್, ಪ್ರೋಫೆಸರ್ ಮಹೇಶ ಚಂದ್ರಗುರು, ಫ್ರೊಫೆಸರ್ ಭಗವಾನ್, ದಿನೇಶ್ ಅಮಿನಮಟ್ಟು, ಸಾಹಿತಿ ಚಂಪಾ, ಗಣೇಶ, ಅಗ್ನಿ ಶ್ರೀಧರ್, ಬೃಂದಾ ಕಾರಟ್, ಮಾಜಿ ಸಿಎಂ ಎಚ್‍ಡಿಕೆ ಹೆಸರನ್ನು ಪ್ರಸ್ತಾಪಿಸಲಾಗಿದೆ. ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಸದ್ಯ ಜೇವರ್ಗಿಯಲ್ಲಿ ಇರುವ ನಿಜಗುಣಾನಂದ ಶ್ರೀಗೆ ಈಗಾಗಲೇ ಭದ್ರತೆ ಒದಗಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *