ವಿಡಿಯೋ: ಮಾರು ವೇಷ ತೊಟ್ಟ ಆಟೋ ಚಾಲಕರಿಂದ ಸೆಕ್ಸ್ ಆಫರ್

Public TV
2 Min Read

-ಫೇಕ್‍ಗಳಿಗೆ ಪೊಲೀಸರೂ ಸಪೋರ್ಟ್

ಬೆಂಗಳೂರು: ಕನ್ನಡ ನಾಡಿನಲ್ಲಿ ನಮ್ಮ ಜನ ಆಟೋ ಚಾಲಕರಿಗೆ ಒಂದು ಸ್ಥಾನಮಾನ ಗೌರವ ಕೊಟ್ಟಿದ್ದಾರೆ. ಆಟೋವನ್ನ ಇದು ಕನ್ನಡದ ತೇರು ಅಂತಾನೇ ಬಿಂಬಿಸಿದ್ದಾರೆ. ದಿನದ 24 ಗಂಟೆನು ಸಹ ಆಟೋಚಾಲಕರು ನಿಯತ್ತಾಗಿ ಜನರ ಸೇವೆ ಮಾಡುತ್ತಿದ್ದಾರೆ. ನಿಯತ್ತಾಗಿ ದುಡಿಯುವ ನಿಜವಾದ ಆಟೋ ಚಾಲಕರಿಗೆ ಮಸಿ ಬಳಿಯುವ ಕೆಲಸವನ್ನು ಈ ಮಾರುವೇಷ ತೊಟ್ಟ ಕಳ್ಳರು ಮಾಡುತ್ತಿರುವುದು ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ನಲ್ಲಿ ಬಯಲಾಗಿದೆ.

ಮೆಜೆಸ್ಟಿಕ್ ನ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಮತ್ತು ರೈಲ್ವೆ ನಿಲ್ದಾಣದಿಂದ ಯುವಕರು ಮೆಜೆಸ್ಟಿಕ್ ಅಂಡರ್ ಪಾಸ್ ಒಳಗಡೆ ಬರೋದನ್ನೇ ಈ ಫೇಕ್ ವೇಷ ತೊಟ್ಟ ಆಟೋ ಚಾಲಕರು ಗಮನಿಸುತ್ತಾ ಇರುತ್ತಾರೆ. ಯುವಕರು ಅಂಡರ್ ಪಾಸ್ ನಿಂದ ಮೇಲೆ ಬಂದು ನಿಂತುಕೊಂಡರೆ ಸಾಕು, ನಿಜವಾದ ಆಟೋ ಡ್ರೈವರ್ ಗಳಂತೆ ವೇಷ ತೊಟ್ಟ ನಕಲಿ ಆಟೋ ಡ್ರೈವರ್ ಗಳು ಯುವಕರ ಬಳಿಗೆ ಬಂದು ಎಲ್ಲಿ ಹೋಗಬೇಕು ಸರ್, ಹುಡುಗಿ ಬೇಕಾ? ರೂಮಿಗೆ ಹೋಗೋಣ್ವ? ಲಾಡ್ಜಿಗೆ ಹೋಗೋಣ್ವ ಎಲ್ಲಾ ವ್ಯವಸ್ಥೆ ಇದೆ ಎಂದು ಯುವತಿಯರ ಫೋಟೋ ತೋರಿಸಿ ಬನ್ನಿ ಎಂದು ಸೆಕ್ಸ್ ಆಫರ್ ಕೊಟ್ಟು ಪುಸಲಾಯಿಸ್ತಾರೆ.

ಈ ದಂಧೆಯನ್ನ ಪಬ್ಲಿಕ್ ಟಿವಿ ತಂಡ ಬೆನ್ನತ್ತಿ ಹೋಯ್ತು. ಮೆಜೆಸ್ಟಿಕ್ ಅಂಡರ್ ಪಾಸ್ ಒಳಗಡೆ ಹೋಗಿ ಮೆಟ್ರೋ ನಿಲ್ದಾಣದ ಕಡೆಗೆ ಹೋಗುವ ಅಂಡರ್ ಪಾಸ್ ಮೇಲೆ ನಿಂತುಕೊಂಡೆವು. ಆಗ ಬೇರೆ ಡ್ರೈವರ್ ಗಳು ಜನರಲ್ಲಿ ಯಾವ ಕಡೆ ಹೋಗಬೇಕು ಬನ್ನಿ ಕರೆದುಕೊಂಡು ಹೋಗುತ್ತೇವೆ ಅಂತಾರೆ. ಆದರೆ ನಕಲಿ ಆಟೋ ಡ್ರೈವರ್ ಗಳು ಯುವಕರ ಬಳಿಗೆ ಮಾತ್ರ ಬರುತ್ತಾರೆ ಬಂದು ಹುಡುಗಿ ಫೋಟೋ ತೋರಿಸಿ ಸೆಕ್ಸ್ ಆಫರ್ ಬಗ್ಗೆ ವಿವರಣೆ ಕೊಟ್ಟು ಯಾಮಾರಿಸುತ್ತಾರೆ.

ಪಬ್ಲಿಕ್ ಟಿವಿ ತಂಡ ಕೂಡ ನಕಲಿ ಆಟೋ ಡ್ರೈವರ್ ಜೊತೆ ಮಾತನಾಡಿ ಆ ಮೇಲೆ ಸಿಗುವುದಾಗಿ ಹೇಳಿ ಆತನ ನಂಬರ್ ತಗೊಂಡು ನಂತರ ಡ್ರೈವರ್ ಗೆ ಕಾಲ್ ಮಾಡಿ ಎಲ್ಲಿ ಏನು ಕಥೆ ಎಂದು ಎಲ್ಲ ತಂಡ ವಿಚಾರಿಸಿತ್ತು. ಪೊಲೀಸರು ಬರಲ್ವ ಅಂದರೆ ಅವರು ಬರಲ್ಲ ಕಮೀಷನ್ ಕೊಡುತ್ತೇವೆ ಎಂದು ಕರಾಳ ದರ್ಶನದ ಚಿತ್ರಣ ಬಿಚ್ಚಿಟ್ಟಿದ್ದಾನೆ.

ಪೊಲೀಸ್ರೇ ಕಾವಲುಗಾರರು!
ಈ ದಂಧೆ ನಡೆಯೋ ಆಟೋ ಸ್ಟಾಂಡ್ ಪಕ್ಕದಲೇ ಟ್ರಾಫಿಕ್ ಪೊಲೀಸರು ಇದ್ದಾರೆ. ಆದರೆ ಇದರ ಬಗ್ಗೆ ಕ್ಯಾರೇ ಅನ್ನೋದೇ ಇಲ್ಲ. ಇದೇನು ಪೊಲೀಸರು ಏನು ಕೇಳ್ತಾನೆ ಇಲ್ವಲ್ಲ ಎಂದು ನೋಡುತ್ತಿದ್ದಂತೆಯೇ ದಂಧೆ ನಡೆಸೋ ನಕಲಿ ಆಟೋ ಡ್ರೈವರ್ಸ್ ದುಡ್ಡು ಕಲೆಕ್ಟ್ ಮಾಡಿ ಪೊಲೀಸರಿಗೆ ಕಮಿಷನ್ ಕೊಡುವುದು ಗಮನಕ್ಕೆ ಬಂದಿದೆ. ನಕಲಿ ಆಟೋ ಡ್ರೈವರ್ ಗಳಿಂದ ಪೋಲೀಸರು ಕಮೀಷನ್ ಪಡೆಯೋದು ಪಬ್ಲಿಕ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

https://www.youtube.com/watch?v=RIOKZVaFuhM

Share This Article
Leave a Comment

Leave a Reply

Your email address will not be published. Required fields are marked *