ಬೆಂಗಳೂರು | ಆರೋಗ್ಯ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಪತ್ನಿಗೆ ಇಂಜೆಕ್ಷನ್‌ ಕೊಟ್ಟು ಕೊಂದ ಕಿಲ್ಲರ್‌ ಡಾಕ್ಟರ್‌

Public TV
2 Min Read

– 6 ತಿಂಗಳ ಬಳಿಕ ಬಯಲಾಯ್ತು ವೈದ್ಯನ ಸಂಚು!

ಬೆಂಗಳೂರು: ಅನಸ್ತೇಶಿಯಾ ನೀಡಿ ಪತ್ನಿಯನ್ನು (Wife) ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ವೈದ್ಯನನ್ನು (Doctor) ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಡಾ.ಮಹೇಂದ್ರ ರೆಡ್ಡಿ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಡಾ.ಕೃತಿಕಾ ರೆಡ್ಡಿಯವರಿಗೆ ಅನಸ್ತೇಶಿಯಾ ನೀಡಿ ಆಕೆಯ ತವರು ಮನೆಯಲ್ಲೇ ಕೊಲೆ ಮಾಡಿದ್ದ. ಇದು ಸಹಜ ಸಾವು ಎಂಬಂತೆಯೇ ಆರೋಪಿ ಬಿಂಬಿಸಿದ್ದ. ಕೊಲೆ ಮಾಡಿದ ಆರು ತಿಂಗಳ ಬಳಿಕ ಹಂತಕನ ಸಂಚು ಬಯಲಾಗಿದೆ. ಡರ್ಮೆಟಾಲಜಿಸ್ಟ್ ಆಗಿದ್ದ ಕೃತಿಕಾ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಕೆಲಸ ಮಾಡ್ತಿದ್ದರು. ಆರೋಪಿ ಮಹೇಂದ್ರ ರೆಡ್ಡಿ ಸಹ ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ. ಇದನ್ನೂ ಓದಿ: ಚಿಕ್ಕಮಗಳೂರು | 5 ತಿಂಗಳ ಹಿಂದಷ್ಟೇ ಮದುವೆ – ಜಗಳವಾಡಿ ತವರು ಸೇರಿದ್ದ ಪತ್ನಿಯನ್ನು ಇರಿದು ಕೊಂದ ಪತಿ

2024ರ ಮೇ 26ರಂದು ಮಹೇಂದ್ರ ಮತ್ತು ಕೃತಿಕಾ ರೆಡ್ಡಿಗೆ ಮದುವೆಯಾಗಿತ್ತು. ವೈದ್ಯೆಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್‌ ಸಮಸ್ಯೆ ಇತ್ತು. ಈ ವಿಚಾರ ಮಹೇಂದ್ರನಿಗೆ ತಿಳಿಸದೆ ಮದುವೆ ಮಾಡಿದ್ದರು. ಮದುವೆಯಾದ ಬಳಿಕ ಈ ವಿಚಾರ ಮಹೇಂದ್ರನಿಗೆ ಗೊತ್ತಾಗಿತ್ತು. ನಿತ್ಯ ವಾಂತಿ ಹಾಗೂ ಇತರ ಸಮಸ್ಯೆಯಿಂದ ಕೃತಿಕಾ ಬಳಲ್ತಿದ್ದರು. ಇದೇ ಕಾರಣಕ್ಕೆ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ.

ತಂದೆ ಮನೆಯಲ್ಲಿ ಹುಷಾರಿಲ್ಲದೇ ಮಲಗಿದ್ದ ಕೃತಿಕಾಗೆ ಆರೋಪಿ ಐವಿ ಇಂಜೆಕ್ಷನ್ ಮೂಲಕ ಒಂದಷ್ಟು ಮೆಡಿಸನ್ ನೀಡಿದ್ದ. ಎರಡು ದಿನ ನಿರಂತರ ಮೆಡಿಸಿನ್ ನೀಡಲಾಗಿತ್ತು. ಬಳಿಕ ಈ ವರ್ಷ ಏ.23ರಂದು ಅವರು ಜ್ಞಾನ ತಪ್ಪಿದ್ದರು. ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು.

ಘಟನೆ ಬಳಿಕ ಅಸ್ಪತ್ರೆಯಿಂದ ಡೆತ್ ಮೆಮೊ ಬಂದಿದ್ದ ಹಿನ್ನೆಲೆ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಕುಟುಂಬದಿಂದ ದೂರು ಪಡೆದು ಯುಡಿಆರ್ ದಾಖಲು ಮಾಡಲಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹದ ಸ್ಯಾಂಪಲ್‌ನ್ನು ಎಫ್ಎಸ್ಎಲ್‌ಗೆ ಕಳಿಸಲಾಗಿತ್ತು. ಎಫ್‌ಎಸ್‌ಎಲ್‌ ವರದಿಯಲ್ಲಿ ಅನಸ್ತೇಶಿಯಾ ಅಂಶಗಳು ಪತ್ತೆಯಾಗಿದ್ದು, ಸಾವಿಗೆ ಇದೇ ಕಾರಣ ಎಂದು ತಿಳಿದು ಬಂದಿತ್ತು.


ಇನ್ನೂ ಕೇಸ್‌ ದಾಖಲಾದ ಬಳಿಕ ಆರೋಪಿ ಮಣಿಪಾಲಿಗೆ ತೆರಳಿದ್ದ. ಅಲ್ಲಿಯೇ ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ: ಫೇಸ್‌ಬುಕ್‌ನಲ್ಲಿ ಡೆತ್‌ ನೋಟ್‌ ಬರೆದು, ಬೆಂಕಿ ಹಚ್ಚಿಕೊಂಡು ನವವಿವಾಹಿತೆ ಆತ್ಮಹತ್ಯೆ!

Share This Article