ಕೂಲಿ ಮಾಡೋರು ತೆರಿಗೆ ಕಟ್ತಾರೆ, ದೊಡ್ಡ ಮಂದಿಗೆ ಆಗಲ್ವಾ: ಡಿಕೆಶಿಗೆ ಎಂಟಿಬಿ ನಾಗರಾಜ್ ಟಾಂಗ್

Public TV
1 Min Read

– ನನ್ನ ಮೇಲೆ ಮೂರು ಬಾರಿ ಐಟಿ ದಾಳಿ ನಡೆದಿದೆ

ಬೆಂಗಳೂರು: ಮದ್ಯ ಕುಡಿಯುವವರು, ಕೂಲಿ ಮಾಡುವವರು ತೆರಿಗೆ ಕಟ್ಟುತ್ತಾರೆ. ದೊಡ್ಡ ದೊಡ್ಡ ಮಂದಿಗೆ ತೆರಿಗೆ ಕಟ್ಟುವುದಕ್ಕೆ ಆಗಲ್ವಾ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಬಂಧನ ವಿಚಾರವಾಗಿ ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಮಾತನಾಡಿದ ಅವರು, ನ್ಯಾಯಕ್ಕಿಂತ ಈ ಜಗತ್ತಿನಲ್ಲಿ ಯಾರೂ ದೊಡ್ಡವರಿಲ್ಲ. ದೇಶದ 120 ಕೋಟಿ ಜನಸಂಖ್ಯೆಗೂ ಒಂದೇ ಕಾನೂನು ಇದೆ. ಸರ್ಕಾರಕ್ಕೆ ಸಕಾಲದಲ್ಲಿ ತೆರಿಗೆ ಹಣ ಪಾವತಿಸಬೇಕು. ಸಾರ್ವಜನಿಕರಿಂದ ಸರ್ಕಾರವೇ ಹೊರತು ಸರ್ಕಾರದಿಂದ ಸಾರ್ವಜನಿಕರಲ್ಲ. ಪ್ರಜಾತಂತ್ರದ ವ್ಯವಸ್ಥೆಯಲ್ಲಿ ತೆರಿಗೆ ಹಣದಿಂದ ಅಭಿವೃದ್ಧಿ ಮಾಡಲಾಗುತ್ತದೆ. ಎಷ್ಟೇ ದೊಡ್ಡವರು ಆಗಿದ್ದರೂ ತೆರಿಗೆ ವಂಚನೆ ಮಾಡಬಾರದು ಎಂದು ಹೇಳಿದರು.

ಆದಾಯ ತೆರಿಗೆ ಅಧಿಕಾರಿಗಳು ನನ್ನ ಮೇಲೂ ಮೂರು ಬಾರಿ ದಾಳಿ ಮಾಡಿದ್ದಾರೆ. ನನ್ನ ಮನೆ ಮೇಲೆ ಐಟಿ ದಾಳಿಯಾದ 20 ದಿನಗಳ ಬಳಿಕ ಡಿ.ಕೆ.ಶಿವಕುಮಾರ್ ಅವರ ಮೇಲೆ ಆಗಿದೆ. ಡಿ.ಕೆ,ಶಿವಕುಮಾರ್ ಅವರಿಂದ ತೆರಿಗೆ ಕಟ್ಟುವುದರಲ್ಲಿ ವ್ಯತ್ಯಾಸ ಆಗಿರಬಹುದು. ಅದಕ್ಕೆ ಅವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರಿಗೆ ಅಲ್ಲಿ ನ್ಯಾಯ ಸಿಗಬಹುದು ಎಂದು ತಿಳಿಸಿದರು.

ನಾವು ಪಾವತಿಸುವ ಹಣದಿಂದ ಸರ್ಕಾರವು ಸೈನಿಕರು, ಸರ್ಕಾರಿ ನೌಕರರಿಗೆ ವೇತನ, ದೇಶದ ರಕ್ಷಣೆ, ಮಕ್ಕಳಿಗೆ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಬಳಸಿಕೊಳ್ಳುತ್ತದೆ. ಹೀಗಾಗಿ ಯಾರೂ ತೆರಿಗೆ ವಂಚನೆ ಆಗಬಾರದು. ತೆರಿಗೆ ಪಾವತಿಸಿ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್ ಅವರ ಬಂಧನ ಖಂಡಿಸಿ ಬುಧವಾರ ನಡೆದ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಎಂಟಿಬಿ ನಾಗರಾಜ್ ಅವರು, ಜಾತಿ ಹೆಸರಿನಲ್ಲಿ ಪ್ರತಿಭಟನೆ ಅಗತ್ಯವಿರಲಿಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಆತ್ಮ ಸ್ಥೈರ್ಯ ತುಂಬಲು ಪ್ರತಿಭಟನೆ ಮಾಡಿದ್ದಾರೆ. ಅದಕ್ಕೆ ನನ್ನ ಆಕ್ಷೇಪಣೆ ಇಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *