ಮನೆ ಬಾಗಿಲಿಗೆ ಬಿಎಂಟಿಸಿ ಬಸ್ ಕರೆಸಿಕೊಂಡು 1 ಗಂಟೆ ಕಾಯಿಸಿದ ಸಾರಿಗೆ ಸಚಿವ

Public TV
2 Min Read

– ವೋಲ್ವೋ ಬಸ್ಸಿನಲ್ಲಿ ಸಾರಿಗೆ ಸಚಿವ ಸುತ್ತಾಟ
– ಶೀಘ್ರವೇ ನೆರೆಪರಿಹಾರ ಬಿಡುಗಡೆ

ಬೆಂಗಳೂರು: ಬಿಎಂಟಿಸಿ ಬಸ್ಸನ್ನು ತನ್ನ ಮನೆ ಬಾಗಿಲಿಗೇ ಕರೆಸಿಕೊಂಡು ಸರಿ ಸುಮಾರು 1 ಗಂಟೆಗಳ ಕಾಲ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಾಯಿಸಿದ ಪ್ರಸಂಗ ಇಂದು ನಡೆಯಿತು.

ಬಸ್ ಪ್ರಿಯಾರಿಟಿ ಲೇನ್ ಯೋಜನೆ ಜಾರಿ ಕುರಿತಾದ ಪರಿಶೀಲನೆಗೆ ಸಾರಿಗೆ ಸಚಿವರು ನಗರ ಪ್ರದಕ್ಷಿಣೆ ಹಾಕುವ ಹಿನ್ನೆಲೆಯಲ್ಲಿ ಬಸ್ಸನ್ನು ತಮ್ಮ ಮನಗೆ ಕರೆಸಿಕೊಂಡಿದ್ದಾರೆ. ಹೀಗಾಗಿ ಡಿಸಿಎಂ ಅವರ ಒಂದೇ ಒಂದು ಮಾತಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವೋಲ್ವೋ ಬಸ್ ಮನೆ ಮುಂದೆ ಬಂದು ನಿಂತಿತ್ತು.

ಬೆಳಗ್ಗೆ 8 ಗಂಟೆಗೆ ಜಹಮಹಾಲ್ ನ ತಮ್ಮ ಮನೆಯಿಂದ ಡಿಸಿಎಂ ಹೊರಟಿದ್ದಾರೆ. ತಾವು ಮನೆಯಿಂದ ಹೊರ ಬರುತ್ತಿದ್ದಂತೆಯೇ ಬಸ್ ರೆಡಿ ಇರಬೇಕು ಎಂದು ಡಿಸಿಎಂ ಸೂಚಿಸಿದ್ದರು. ಹೀಗಾಗಿ ವೋಲ್ವೋ ಬಸ್ 7 ಗಂಟೆಗೆನೇ ಮನೆ ಮುಂದೆ ಬಂದು ನಿಂತಿತ್ತು. ಬಸ್ ಬಂದ 1 ಗಂಟೆ ಬಳಿಕ ತಮ್ಮ ನಿವಾಸಕ್ಕೆ ಬಂದು ಸಚಿವರು ಬಸ್ ಹತ್ತಿದ್ದಾರೆ. ಬಸ್ ನಿಂತಿದ್ದ ರೋಡಲ್ಲಿ ವಾಕ್ ಮಾಡುವವರಿಗೂ ಸ್ವಲ್ಪ ಓಡಾಡೋಕೆ ಅಡಚಣೆ ಉಂಟಾಯಿತು.

ಸಾರಿಗೆ ಸಚಿವರಾದ ಬಳಿಕ ಲಕ್ಷ್ಮಣ್ ಸವದಿ ಮೊದಲ ಬಾರಿಗೆ ಬಿಎಂಟಿಸಿ ವೋಲ್ವೋ ಬಸ್‍ನಲ್ಲಿ ನಗರ ಸಂಚಾರ ಮಾಡಿದರು. ಪ್ರಯಾಣಿಕರಿಗೆ ಅಗತ್ಯವಾದ ರಸ್ತೆ ಸುಧಾರಿತ ಪ್ರಯಾಣ, ಕಡಿಮೆ ಅವಧಿಯಲ್ಲಿ ಹೆಚ್ಚಿನ ದೂರವನ್ನು ಕ್ರಮಿಸುವುದು, ಹೆಚ್ಚಿನ ಜನರನ್ನು ಬಸ್ಸಿನಲ್ಲಿ ಪ್ರಯಾಣಿಸಲು ಆಕರ್ಷಿಸುವ ನಿಟ್ಟಿನಲ್ಲಿ, ಬಸ್ ಕಾರಿಡಾರ್ ಗಳನ್ನು ರಚಿಸಲು ಯೋಜನೆ ಹಾಗೂ ಮೊದಲನೇ ಹಂತವಾಗಿ ಟಿನ್ ಫ್ಯಾಕ್ಟರಿಯಿಂದ ಸೆಂಟ್ರಲ್‍ನ ಸಿಲ್ಕ್ ಬೋರ್ಡ್ ರಸ್ತೆ ಮಾರ್ಗ ಬಳಕೆ ಮಾಡುವುದರ ಕುರಿತು ಪರಿಶೀಲನೆ ನಡೆಸಿದ್ದಾರೆ.

ಸಿಬ್ಬಂದಿಗೆ 5,000 ನೀಡಿದ ಸಚಿವ:
ಇಂದು ಗಾಂಧಿ ಜಯಂತಿಯ ದಿನವಾಗಿದ್ದರಿಂದ ಸ್ವೀಟ್ ತಿನ್ನಿ ಎಂದು ಡಿಪೋ ತಾಂತ್ರಿಕ ಸಿಬ್ಬಂದಿಗೆ ಸಚಿವರು 5 ಸಾವಿರವನ್ನು ನೀಡಿದರು. ಹೆಚ್ ಎಸ್ ಆರ್ ಲೇಔಟ್ ನ ವೋಲ್ವೋ ಡಿಪೋ 25 ಕ್ಕೆ ಭೇಟಿ ನೀಡಿದ್ದ ಲಕ್ಷ್ಮಣ ಸವದಿ, ಡಿಪೋಗೆ ಭೇಟಿ ನೀಡಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ.

ಭೇಟಿ ಮುಗಿದ ಹೋಗುವ ಸಮಯದಲ್ಲಿ ತಾಂತ್ರಿಕ ನೌಕರರಿಗೆ ಐದು ಸಾವಿರ ಹಣ ನೀಡಿದರು. ಅಲ್ಲದೆ ಯಾವುದೇ ತಪ್ಪು ಮಾಡದಂತೆ, ಚೆನ್ನಾಗಿ ಕೆಲಸ ಮಾಡಿ ಎಂದು ಸಲಹೆ ಕೂಡ ನೀಡಿದರು. ಸಾರಿಗೆ ಸಚಿವರ ಭೇಟಿಯಿಂದ ಡಿಪೋ ನೌಕರರು ಖುಷಿಯಾದರು.

ಏಕಕಾಲದಲ್ಲಿ 5 ರಾಜ್ಯಗಳಿಗೆ ಪರಿಹಾರ:
ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಕುರಿತು ಮಾತನಾಡಿದ ಸಚಿವರು, ಪ್ರವಾಹ ವಿಚಾರ ಕೇಂದ್ರ ಸರ್ಕಾರದ ಗಮನದಲ್ಲಿದೆ. 5 ರಾಜ್ಯದಲ್ಲಿ ನೆರೆ ಪ್ರವಾಹ ಉಂಟಾಗಿದೆ. ಎಲ್ಲಾ 5 ರಾಜ್ಯಗಳಿಗೆ ಏಕಕಾಲಕ್ಕೆ ಬಿಡುಗಡೆ ಮಾಡುತ್ತಾರೆ. ಕೇಂದ್ರ ಗೃಹಸಚಿವರು ಈ ಭರವಸೆ ನೀಡಿದ್ದಾರೆ. ಕೇಂದ್ರದ ನೆರವಿಗೆ ಕಾಯದೆ 2 ಸಾವಿರ ಕೋಟಿ ಈಗಾಗಲೇ ವಿತರಣೆ ಆರಂಭಿಸಿದ್ದೇವೆ. ನಾಳೆ ಸಚಿವ ಸಂಪುಟ ಸಭೆ ಬಳಿಕ ಮನೆ ಕಳೆದುಕೊಂಡವರಿಗೆ 5 ಲಕ್ಷದಲ್ಲಿ ಆರಂಭಿಕವಾಗಿ ನಾಳೆ 1 ಲಕ್ಷ ವಿತರಣೆ ಮಾಡುತ್ತೇವೆ. ಸಾಂತ್ವನ ಹೇಳೋದರಲ್ಲಿ ತಪ್ಪಿಲ್ಲ. ನಮಗೆ ಕೇಂದ್ರದ ಮೇಲೆ ವಿಶ್ವಾಸ ಇದೆ. ನೆರೆ ಪರಿಹಾರ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಭರವಸೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *