ಜಿಲ್ಲಾಧಿಕಾರಿಗಳೇ ಹಳ್ಳಿ ಕಡೆ ನಡೀರಿ- ಹಳ್ಳಿಗಳ ಅಭಿವೃದ್ಧಿಗೆ ಹೊಸ ಕಾರ್ಯಕ್ರಮ

Public TV
2 Min Read

ಬೆಂಗಳೂರು: ಹಳ್ಳಿಗಳ ಕಷ್ಟ ತಿಳಿಯಲು, ಹಳ್ಳಿಗಳ ಸಮಸ್ಯೆ ಪರಿಹಾರ ಮಾಡಲು ಜಿಲ್ಲಾಧಿಕಾರಿಗಳೇ ಹಳ್ಳಿಗಳ ಕಡೆ ನಡೀರಿ ಅನ್ನೋ ಹೊಸ ಕಾರ್ಯಕ್ರಮ ಜಾರಿಗೆ ತರೋದಕ್ಕೆ ಸರ್ಕಾರ ಮುಂದಾಗಿದೆ. ಈ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಸರ್ಕಾರ ಪಣ ತೊಟ್ಟಿದೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಹೊಸ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಟ್ರು. ಹಳ್ಳಿಗಳ ಸಮಸ್ಯೆ, ಅಭಿವೃದ್ಧಿ ಕೆಲಸ ಪ್ರಗತಿ ಪರಿಶೀಲನೆ, ಹಳ್ಳಿಗಳ ಸಮಸ್ಯೆ ಅರಿಯಲು ಡಿಸಿಗಳೇ ಖುದ್ದು ಹಳ್ಳಿಗಳಿಗೆ ಪ್ರವಾಸ ಮಾಡೋ ಕಾರ್ಯಕ್ರಮ ಇದಾಗಿದೆ. ಈಗಾಗಲೇ ಡಿಸಿಗಳ ಜೊತೆ ಈ ಸಂಬಂಧ ಚರ್ಚೆ ಮಾಡಲಾಗಿದ್ದು, ಡಿಸಿಗಳು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಕಾರ್ಯಕ್ರಮ ಜಾರಿಗೆ ತರುತ್ತೇವೆ ಅಂತ ತಿಳಿಸಿದ್ರು.

ಪ್ರತಿ ತಿಂಗಳ 3ನೇ ಶನಿವಾರ ಈ ಕಾರ್ಯಕ್ರಮ ಮಾಡೋ ಚಿಂತನೆ ಇದೆ. ಅಂದು ಜಿಲ್ಲಾಧಿಕಾರಿಗಳು ಒಂದು ಗ್ರಾಮ ಪಂಚಾಯ್ತಿ ಒಂದು ಹಳ್ಳಿಗೆ ಆಯ್ಕೆ ಮಾಡಿಕೊಂಡು ಪ್ರವಾಸ ಮಾಡಬೇಕು. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹಳ್ಳಿಗಳಲ್ಲಿ ಇರಬೇಕು. ಹಳ್ಳಿಗಳ ಸಮಸ್ಯೆಗಳನ್ನ ಆಲಿಸಿ ಪರಿಹಾರ ನೀಡೋ ಕಾರ್ಯಕ್ರಮ ಇದಾಗಿದೆ. ಪ್ರಾರಂಭಿಕ ಹಂತದಲ್ಲಿ ಡಿಸಿಗಳಿಗೆ ಹಳ್ಳಿ ಪ್ರವಾಸ ಮಾಡುವ ಚಿಂತನೆ ಇದ್ದು, ಮುಂದಿನ ದಿನಗಳಲ್ಲಿ ಎಸಿ ಮತ್ತು ತಹಶೀಲ್ದಾರರಿಗೂ ಹಳ್ಳಿ ಪ್ರವಾಸ ಕಡ್ಡಾಯ ಮಾಡೋ ಚಿಂತನೆಯಲ್ಲಿ ಸರ್ಕಾರವಿದೆ.

ನೆರೆಯಿಂದಾಗಿ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ಕೊಟ್ಟು ಸರ್ಕಾರವೇ ಮನೆ ಕಟ್ಟಿಕೊಡುತ್ತಿದೆ. ಮೊದಲ ಕಂತಿನ 1 ಲಕ್ಷ ಈಗಾಗಲೇ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ. ಹೀಗಿದ್ದರೂ ಮನೆ ಕೆಲಸ ಮಾತ್ರ ನಿಗದಿತ ಮಟ್ಟದಲ್ಲಿ ಮುಗಿದಿಲ್ಲ. ಧರ್ನುಮಾಸ ಹಿನ್ನೆಲೆ ಕೆಲಸ ವಿಳಂಬ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ. ಅಧಿಕಾರಿಗಳ ಮಾತಿಗೆ ಒಪ್ಪದ ಸಚಿವ ಅಶೋಕ್ ಈಗ ಧರ್ನುಮಾಸ ಮುಗಿದಿದೆ. ಕೆಲಸ ಪ್ರಾರಂಭ ಮಾಡಬೇಕು. 15 ದಿನಗಳಲ್ಲಿ ಶೇ.50 ರಷ್ಟು ಫೌಂಡೇಶನ್ ಕೆಲಸ ಮುಗಿದಿರಬೇಕು ಅಂತ ಡಿಸಿಗಳಿಗೆ ಸಂದೇಶ ಕೊಟ್ಟಿದ್ದಾರೆ.

ಈಗಾಗಲೇ ಮನೆ ಕಳೆದುಕೊಂಡ 9,009 ಮನೆಗಳ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಮನೆ ನಿರ್ಮಾಣಕ್ಕೆ 5 ಲಕ್ಷ ಕೊಡ್ತೀವಿ. ಮೊದಲ ಹಂತದ ಹಣ ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದ ಹಣ ಡಿಸಿ ಅಕೌಂಟ್ ಗೆ ಹಾಕಲಾಗಿದ್ದು, ಫಲಾನುಭವಿಗಳಿಗೆ ಎರಡನೇ ಹಂತದ ಹಣ ಪಡೆಯಬೇಕು ಅಂತ ಸಚಿವರು ಮನವಿ ಮಾಡಿದ್ದಾರೆ. ಬಿ ವರ್ಗದ ಮನೆಗಳಿಗೆ 3 ಲಕ್ಷ ಕೊಡಲು ಸರ್ಕಾರ ನಿರ್ಧಾರ ಮಾಡಿದೆ. ಒಂದು ವೇಳೆ ಸಂಪೂರ್ಣ ಮನೆ ಕೆಡವಿ ಹೊಸ ಮನೆ ಕಟ್ಟಿಕೊಳ್ಳೋದಾದ್ರೆ ಅವ್ರಿಗೂ 5 ಲಕ್ಷ ಕೊಡ್ತೀವಿ ಅಂತ ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ. ಮನೆಗಳ ನಿರ್ಮಾಣ ಕಾರ್ಯ ಚುರುಕು ಮಾಡಲು ಪಿಡಿಓಗೆ ಜವಾಬ್ದಾರಿ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ಪಿಡಿಓಗಳಿಗೆ 15 ಮನೆ ಉಸ್ತುವಾರಿ ಕೊಡಲು ಸೂಚನೆ ನಿರ್ಧರಿಸಲಾಗಿದೆ. ಪಿಡಿಓಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ಅಮಾನತು ಮಾಡಲು ಸೂಚನೆ ನೀಡಲಾಗಿದೆ ಅಂತ ಸಚಿವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *