ಈಕೆಗೆ ಸೌಂದರ್ಯವೇ ಬಂಡವಾಳ: ಕಂಪೆನಿಗೆಂದು ಹಣ ಪಡೆದು ಟೋಪಿ ಹಾಕಿದ್ದ ಸುಂದರಿ ಅರೆಸ್ಟ್

Public TV
1 Min Read

ಬೆಂಗಳೂರು: ಸೌಂದರ್ಯವನ್ನೇ ಬಂಡವಾಳ ಮಾಡಿ ನನ್ನ ಕಂಪೆನಿಗೆ ಹಣ ಹೂಡಿ ಎಂದು ಹೇಳಿ ವಂಚನೆ ಎಸಗುತ್ತಿದ್ದ ಯುವತಿಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಒಂಡ್ರಿಲಾ ದಾಸ್‍ಗುಪ್ತಾ ಬಂಧಿತ ಆರೋಪಿ. ವಂಚನೆಗೊಳಗಾದ ವ್ಯಕ್ತಿಗಳು ನೀಡಿದ ದೂರಿನ ಆಧಾರದಲ್ಲಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಈಕೆಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.

ವಂಚನೆ ಹೇಗೆ?
ಫ್ಯಾಶನ್, ಬ್ರಾಂಡಿಂಗ್, ಜಾಹೀರಾತು ಕ್ಷೇತ್ರದಲ್ಲಿ ನಾನು ಕಂಪೆನಿಗಳನ್ನು ತೆರೆದಿದ್ದು, ಇದಕ್ಕೆ ಬಂಡವಾಳ ಹೂಡುವಂತೆ ಸಾಮಾಜಿಕ ಜಾಲತಾಣದಲ್ಲಿ ಜನರ ಬಳಿ ಒಂಡ್ರಿಲಾ ಮನವಿ ಮಾಡುತ್ತಿದ್ದಳು. ಈಕೆ ಇಂಗ್ಲಿಷ್ ಭಾಷೆಯ ಹಿಡಿತ, ಸಂವಹನ ಕಲೆಗೆ ಮನಸೋತ ಜನ, ಈಕೆ ನೀಡಿದ್ದ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡುತ್ತಿದ್ದರು.

ಈಕೆ ಜನರಿಂದ ಲಕ್ಷಗಟ್ಟಲೇ ಹಣವನ್ನು ಪಡೆದು ವಂಚಿಸಿದ್ದು, ವಂಚನೆಗೊಳಗಾದ ಮಂದಿ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಸೈಬರ್ ಕ್ರೈಂ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದು, ಈಗ ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.

ಯಾರು ಈ ಒಂಡ್ರಿಲಾ ದಾಸ್ ಗುಪ್ತಾ?
ಜಾರ್ಖಂಡ್‍ನ ಜೆಮ್ಶೆಡ್‍ಪುರದಲ್ಲಿ ಜನಿಸಿದ ಈಕೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದು, ಭಾರತದ ಹೆಸರಾಂತ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಇದಾದ ಬಳಿಕ ದೇಶದ ಪ್ರಸಿದ್ಧ ಫ್ಯಾಶನ್ ಮ್ಯಾಗಜಿನ್ ನಲ್ಲಿ ಉದ್ಯೋಗ ಆರಂಭಿಸಿದ್ದಳು. ಇಲ್ಲಿ ಈಕೆಗೆ ಫ್ಯಾಶನ್ ಜಗತ್ತಿನ ಪರಿಚಯವಾಗಿತ್ತು. ಇದಾದ ಬಳಿಕ eatshoplove.in ಹೆಸರಿನ ಕಂಪೆನಿಯನ್ನು ತೆರೆದಿದ್ದಳು.

ವಿಶೇಷ ಏನೆಂದರೆ ವ್ಯಕ್ತಿಗಳ ಸಾಧನೆಗಳ ಕುರಿತಾಗಿ ಸುದ್ದಿ ಮಾಡುವ ವೆಬ್‍ಸೈಟ್ ಒಂದು ಒಂಡ್ರಿಲಾ ದಾಸ್ ಗುಪ್ತಾಳ ಸಾಧನೆಯನ್ನು ವಿವರಿಸಿತ್ತು. ಇದರಲ್ಲಿ ಬಂದಿರುವ ಸುದ್ದಿಯನ್ನು ಇಟ್ಟುಕೊಂಡು ಈಕೆ ತನ್ನ ಸಾಧನೆಯನ್ನು ಜನರಿಗೆ ತಿಳಿಸಿ ಅವರ ಮನವೊಲಿಸಲು ಯಶಸ್ವಿಯಾಗುತ್ತಿದ್ದಳು.

https://youtu.be/2HQ3ZrQMlc4

 

Share This Article
Leave a Comment

Leave a Reply

Your email address will not be published. Required fields are marked *