ಹೆಚ್ಚುತ್ತಿದೆ ಕೊರೊನಾ ವೈರಸ್ ಭೀತಿ – ಕರ್ನಾಟಕದಲ್ಲಿ ಕಟ್ಟೆಚ್ಚರ

Public TV
2 Min Read

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕರ ಜೊತೆ ಕೇಂದ್ರದ ಮುಖ್ಯ ಕಾರ್ಯದರ್ಶಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ವೈರಸ್ ಬಗ್ಗೆ ರಾಜ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆಗೆ ಸೂಚನೆ ನಿಡಲಾಗಿದೆ. ಮಂಗಳೂರು, ಕಾರವಾರದಲ್ಲಿ ಸಹ ಪ್ರಯಾಣಿಕರ ತಪಾಸಣೆಗೆ ಸೂಚಿಸಲಾಗಿದೆ. ಚೀನಾಕ್ಕೆ ಹೋಗಿ ರಾಜ್ಯಕ್ಕೆ ವಾಪಸ್ ಬಂದವರನ್ನು 28 ದಿನ ತಪಾಸಣೆಗೆ ಒಳಪಡಿಸಲು ಸೂಚಿಸಲಾಗಿದೆ. ಹಾಗೆಯೇ ಪ್ರಮುಖ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯುವಂತೆ ತಿಳಿಸಲಾಗಿದೆ. ಜೊತೆಗೆ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಯಲ್ಲೂ ಐದು ಹಾಸಿಗೆಯುಳ್ಳ ಸುಸಜ್ಜಿತವಾದ isolation ವಾರ್ಡ್ ತೆರೆಯಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದನ್ನೂ ಓದಿ: ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?

ರಾಜ್ಯದಲ್ಲಿ ಸದ್ಯ ಸೋಂಕು ಶಂಕಿತ 21 ಪ್ರಯಾಣಿಕರು ತೀವ್ರ ನಿಗಾವಣೆಯಲ್ಲಿದ್ದಾರೆ. ಅದರಲ್ಲಿ ಹತ್ತು ಮಂದಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಬಗ್ಗೆ ತೀವ್ರ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ.

ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿರುವ ಮಹಾಮಾರಿ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ದೇಶದಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಕೇರಳ ವಿದ್ಯಾರ್ಥಿಯೊಬ್ಬನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಆತನಿಗೆ ಕೇರಳದ ತ್ರಿಶ್ಯೂರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಭಾರತದಾದ್ಯಂತ ಸುಮಾರು 900 ಜನರು ಪರೀಕ್ಷೆಗೆ ಒಳಪಡಿಸಲಾಗಿದೆ. ಕೇರಳದಲ್ಲಿ ವೀಕ್ಷಣೆಯಲ್ಲಿರುವ 806 ಜನರಲ್ಲಿ 10 ಮಂದಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳಲ್ಲಿದ್ದರೆ, ಉಳಿದವರು ಮನೆಯಿಂದಲೇ ಆಸ್ಪತ್ರೆಗಳ ಸಂಪರ್ಕದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಕನಿಷ್ಠ 27 ಜನರನ್ನು ವೀಕ್ಷಣೆಗೆ ಒಳಪಡಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರಲ್ಲಿ 10 ಜನರನ್ನು ಪ್ರತ್ಯೇಕಿಸಲಾಗಿದೆ. ಎರಡು ದಿನಗಳ ಹಿಂದೆ ಚೀನಾದಿಂದ ಹಿಂದಿರುಗಿದ ಪಂಜಾಬ್‍ನ ಮೊಹಾಲಿಯ ನಿವಾಸಿ 28 ವರ್ಷದ ಯುವಕನನ್ನು ಚಂಡೀಗಢ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದೆ.

ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ತ್ರಿಪುರದ ಮುನೀರ್ ಎಂಬಾತ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾನೆ. ಕೊರೊನಾ ವೈರಸ್ ಇದುವರೆಗೂ 17 ದೇಶಗಳಿಗೆ ವ್ಯಾಪಿಸಿದ್ದು, ಚೀನಾದಲ್ಲಿ 213ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 9 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಿದೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *