ಇಂದು ರಾಜ್ಯದಲ್ಲಿ ದೋಸ್ತಿಗಳ ಶಕ್ತಿ ಪ್ರದರ್ಶನ – ಬೆಂಗ್ಳೂರಲ್ಲಿ ರಣಕಹಳೆ ಮೊಳಗಿಸ್ತಾರೆ ರಾಹುಲ್, ಗೌಡ್ರು

Public TV
2 Min Read

– 5 ಲಕ್ಷ ಕಾರ್ಯಕರ್ತರು ಬರುವ ನಿರೀಕ್ಷೆ

ಬೆಂಗಳೂರು: ಕರುನಾಡಲ್ಲಿ ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕ ಸಮರದ ಕಹಳೆ ಮೊಳಗಿಸಲಿದ್ದಾರೆ. ರಾಜ್ಯಕ್ಕೆ ಬರ್ತಿರೋ ರಾಹುಲ್ ಗಾಂಧಿ, ಬೆಂಗಳೂರು ಹೊರವಲಯ ನೆಲಮಂಗಲ ಸಮೀಪ ಇರೋ ಮಾದಾವರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ದೋಸ್ತಿಗಳು ಜಂಟಿಯಾಗಿ ಆಯೋಜಿಸಿರೋ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮೋದಿ ವಿರುದ್ಧ ಘರ್ಜಿಸಲಿದ್ದಾರೆ.

ದೋಸ್ತಿಗಳ ರ‍್ಯಾಲಿಯಾದ ಕಾರಣ ವೇದಿಕೆಯಲ್ಲಿ ರಾಹುಲ್ ಜೊತೆಗೆ ಜೆಡಿಎಸ್ ವರಿಷ್ಠರಾದ ಹೆಚ್‍ಡಿ ದೇವೇಗೌಡರು, ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಸೇರಿದಂತೆ ಹಲವರು ಪಾಲ್ಗೊಂಡು, ದೇಶಕ್ಕೆ ಮಹಾಘಟಬಂಧನ್ ಸಂದೇಶ ರವಾನಿಸಲಿದ್ದಾರೆ.

ಇಂದಿನ ಸಮಾವೇಶ ದೊಡ್ಡ ಮಟ್ಟದ ಶಕ್ತಿ ಪ್ರದರ್ಶನದ ವೇದಿಕೆಯಾಗಿದ್ದು, ಆ ವೇದಿಕೆ ಮೂಲಕವೇ ವಿಪಕ್ಷ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಲು ದೋಸ್ತಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಜಂಟಿ ಸಮಾವೇಶದ ಮೂಲಕ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮುಖಂಡರುಗಳಿಗೆ ಹೊಸ ಸಂದೇಶ ರವಾನಿಸುವ ಗುರಿ ದೋಸ್ತಿ ನಾಯಕರದ್ದಾಗಿದೆ. ಬೆಂಗಳೂರಿನಲ್ಲಿ ಆದ ದೋಸ್ತಿ, ಬೂತ್ ಮಟ್ಟದಲ್ಲಿ ಆಗಿಲ್ಲ ಎಂಬ ಆತಂಕವು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಲ್ಲಿದೆ.

ಎರಡು ಪಕ್ಷದ ರಾಜ್ಯ ಹಾಗೂ ರಾಷ್ಟ್ರ ನಾಯಕರು ಜಂಟಿ ಸಮಾವೇಶ ನಡೆಸುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಲು ತೀರ್ಮಾನಿಸಿದ್ದಾರೆ. ಅಲ್ಲದೆ ಕ್ಷೇತ್ರವಾರು ಮುಖಂಡರುಗಳ ನಡುವಿನ ಭಿನ್ನಾಭಿಪ್ರಾಯ ದೂರ ಮಾಡಲು ಕೂಡ ಈ ಸಭೆ ನೆರವಾಗಲಿದೆ ಎನ್ನುವುದು ದೋಸ್ತಿಗಳ ನಿರೀಕ್ಷೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಫೈಟ್ ನೀಡುತ್ತೆ ಎನ್ನುವ ರಾಜಕೀಯ ವಾತಾವರಣ ಸೃಷ್ಟಿಸುವ ಪ್ರಯತ್ನದ ಭಾಗವಾಗಿ ಈ ಸಮಾವೇಶ ನಡೆಸಲಾಗುತ್ತಿದೆ. ಅಂದಾಜು 5 ಲಕ್ಷ ಜನರನ್ನ ಸೇರಿಸಿ ಶಕ್ತಿ ಪ್ರದರ್ಶನದ ಮೂಲಕ ಕಾರ್ಯಕರ್ತರಲ್ಲಿ ಜೋಶ್ ತುಂಬುವ ಪ್ರಯತ್ನವು ಇದಾಗಿದೆ.

ಹಳೆ ಮೈಸೂರು ಭಾಗದಲ್ಲಿ ಎರಡು ಪಕ್ಷಗಳಿಗೆ ಈ ಸಮಾವೇಶದ ಮೂಲಕ ಹೊಸ ಹುರುಪು ಬರಬಹುದು. ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದಿರುವ ಉತ್ತರ ಕರ್ನಾಟಕದ ಭಾಗದಲ್ಲಿ ಸಹ ಜೆಡಿಎಸ್ ಕಾಂಗ್ರೆಸ್ ಜಂಟಿ ಪ್ರಚಾರಕ್ಕೆ ಸಮಾವೇಶದ ಮೂಲಕ ದೋಸ್ತಿ ನಾಯಕರು ಸಂದೇಶ ರವಾನಿಸಲಿದ್ದಾರೆ. ವಿಶೇಷವಾಗಿ ಹಾಸನ ಹಾಗೂ ಮಂಡ್ಯದಲ್ಲಿನ ಕಾಂಗ್ರೆಸ್ ನಾಯಕರ ಭಿನ್ನರಾಗವು ಈ ಸಮಾವೇಶದ ನಂತರ ಸರಿಯಾಗಬಹುದು ಎಂಬುದು ಮುಖಂಡರ ನಿರೀಕ್ಷೆಯಾಗಿದೆ. ಇಂದಿನ ಸಮಾವೇಶದ ನಂತರ ಜೆಡಿಎಸ್ ಕಾಂಗ್ರೆಸ್ ನಾಯಕರು ಎಲ್ಲಾ 28 ಕ್ಷೇತ್ರದಲ್ಲೂ ಜೊತೆ ಜೊತೆಯಲ್ಲಿ ಹೆಜ್ಜೆ ಇಡಲು ಇದು ಆರಂಭಿಕ ಹೆಜ್ಜೆಯಾಗಲಿದೆ.

ರಾಹುಲ್ ಗಾಂಧಿ ಹಾಗೂ ದೇವೇಗೌಡರು ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಖಂಡರ ಹಾಗೂ ಕಾರ್ಯಕರ್ತರ ಅನುಮಾನಗಳನ್ನು ದೂರ ಮಾಡುವ ಗುರಿ ದೋಸ್ತಿ ನಾಯಕರದ್ದಾಗಿದೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ವೇದಿಕೆ ಹಂಚಿಕೊಳ್ಳುವ ಮೂಲಕ ಹಳೆತನವನ್ನ ನಾವು ಮರೆತಿದ್ದೇವೆ. ನೀವು ಮರೆಯಿರಿ ಎನ್ನುವ ಸಂದೇಶ ರವಾನಿಸಲು ತೀರ್ಮಾನಿಸಿದ್ದಾರೆ. ಹೀಗೆ ಲೋಕಸಭಾ ಚುನಾವಣೆಗೆ ದೋಸ್ತಿಗಳ ಅಧಿಕೃತ ರಣಕಹಳೆಯಾಗಿ ಇಂದು ಮೊಳಗಲಿದೆ.

Share This Article
Leave a Comment

Leave a Reply

Your email address will not be published. Required fields are marked *