ಬೆಂಗಳೂರು: ಸಮ್ಮಿಶ್ರ ಸರ್ಕಾರದ ಶಾಸಕರು ರಾಜೀನಾಮೆ ನೀಡುತ್ತಿದ್ದರೆ ಇತ್ತ ಇಷ್ಟು ದಿನ ತೆರೆಮರೆಯಲ್ಲಿ ನಿಂತು ದಾಳ ಉರುಳಿಸುತ್ತಿದ್ದ ಬಿಜೆಪಿ ಇಂದಿನಿಂದ ಅಧಿಕೃತವಾಗಿ ಅಖಾಡಕ್ಕೆ ಇಳಿಯುತ್ತಿದೆ.
ಸ್ಪೀಕರ್ ಮೇಲೆ ಒತ್ತಡ ಹೇರುವ ಸಲುವಾಗಿ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ 2 ಗಂಟೆ ಧರಣಿ ಕುಳಿತು ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಸ್ಪೀಕರ್ ಭೇಟಿ ಮಾಡಲು ಉದ್ದೇಶಿಸಿದೆ. ಆದರೆ ಸ್ಪೀಕರ್ ಬಿಜೆಪಿ ನಿಯೋಗದ ಭೇಟಿಗೆ ಅವಕಾಶ ಕೊಡ್ತಾರಾ ಇಲ್ವಾ ಅನ್ನೋದು ಗೊತ್ತಿಲ್ಲ.
ಜೊತೆಗೆ ಮಧ್ಯಾಹ್ನ 1 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿ, ಸಂವಿಧಾನ ಬಿಕ್ಕಟ್ಟು ಉದ್ಭವಿಸಿದೆ. ದಯವಿಟ್ಟು ತಾವು ಮಧ್ಯ ಪ್ರವೇಶ ಮಾಡಬೇಕು ಎಂದು ಮನವಿ ಮಾಡಲಿದೆ. ಇದರ ಜೊತೆ ಜೊತೆಗೆ ಇಂದು ಕೇಂದ್ರ ಗೃಹ ಸಚಿವಾಲಯಕ್ಕೂ ಬಿಜೆಪಿ ದೂರು ಕೊಡಲು ನಿರ್ಧರಿಸಿದೆ.
ಇತ್ತ ಕಾಂಗ್ರೆಸ್ ಕೂಡ ಸುಮ್ಮನೆ ಕುಳಿತಿಲ್ಲ. ರಾಜಭವನಕ್ಕೆ ಮುತ್ತಿಗೆ ಹಾಕಿ ರಾಜ್ಯಪಾಲರ ಮೇಲೆ ಒತ್ತಡ ಹೇರಲು ತೀರ್ಮಾನಿಸಿದೆ. ಬಿಜೆಪಿ ಪರ ದಾಳ ಉರುಳಿಸೋದನ್ನು ಬಿಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲು ಪ್ಲಾನ್ ಮಾಡ್ಕೊಂಡಿದೆ. ದೋಸ್ತಿ ಸರ್ಕಾರ ಉಳಿಸೋಕೆ ಕಾಂಗ್ರೆಸ್ ಹೈಕಮಾಂಡೇ ಅಖಾಡಕ್ಕಿಳಿದಿದ್ದು ಮಂಗಳವಾರ ಕೆಕೆ ಗೆಸ್ಟ್‍ಹೌಸ್‍ನಲ್ಲಿ ಕಾಂಗ್ರೆಸ್ ಮುಖಂಡ ಗುಲಾಂ ನಬೀ ಆಜಾದ್ ಸಭೆ ನಡೆಸಿದರು.
ಇಂದು ಮಧ್ಯಾಹ್ನ 12 ಗಂಟೆಗೆ ಕಾಂಗ್ರೆಸ್-ಜೆಡಿಎಸ್ ನಾಯಕರು ಕಬ್ಬನ್ ಪಾರ್ಕ್‍ನಿಂದ ಹೊರಟು ರಾಜಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.