ಯಡಿಯೂರಪ್ಪ ಎಲ್ಲಿದ್ದಿಯಪ್ಪ?- ಬಿಜೆಪಿ ಕಾಲೆಳೆದ ಕಾಂಗ್ರೆಸ್

Public TV
2 Min Read

ಬೆಂಗಳೂರು: ಉತ್ತರ ಕರ್ನಾಟದಲ್ಲಿ ಮತ್ತೆ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿ ಬಿಜೆಪಿಯವರ ಕಾಲೆಳೆದಿದೆ.

ಪ್ರವಾಹ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರವಾಹದಿಂದ ಕರ್ನಾಟಕ ನಲುಗಿ ಹೋಗಿದೆ. ನಿಲ್ಲುವ ನೆಲೆಗೂ, ತಿನ್ನುವ ಆಹಾರಕ್ಕೂ ಪರದಾಟ ಶುರುವಾಗಿದೆ. ಸಂತ್ರಸ್ತರು ಯಡಿಯೂರಪ್ಪ ಎಲ್ಲಿದ್ದಿಯಪ್ಪ ಎಂದು ಕೂಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ?, 25 ಮಂದಿ ಬಿಜೆಪಿ ಸಂಸದರು ಕಾಣೆಯಾಗಿದ್ದಾರೆಯೇ?, ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಬದುಕಿವೆಯೇ ಎಂದು ಪ್ರಶ್ನಿಸಿದೆ. ಅಲ್ಲದೆ ಹ್ಯಾಶ್ ಟ್ಯಾಗ್ ಬಳಸಿ ಸಂತ್ರಸ್ತರನ್ನು ಕಾಪಾಡಿ ಎಂದು ಕಾಂಗ್ರೆಸ್ ಬರೆದುಕೊಂಡಿದೆ.

ಕಳೆದೆರಡು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹದಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ನೆರೆ ಬಂದು ನೋಡನೋಡುತ್ತಿದ್ದಂತೆಯೇ ಜನ-ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ಇತ್ತ ಮನೆ ಮಠಗಳನ್ನು ಕಳೆದುಕೊಂಡು ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ.

ಇತ್ತ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿಯ ಬಾಲಕಿ ಅನ್ನಪೂರ್ಣ ಪ್ರವಾಹದ ನೀರಲ್ಲಿ ನಿಂತು ಪತ್ರದ ಮೂಲಕ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಗೆ ಸವಾಲು ಹಾಕಿದ್ದಾಳೆ.

ರನ್ನ ಬೆಳಗಲಿ ಪಟ್ಟಣದ ಮುಖ್ಯ ಅಧಿಕಾರಿಗಳು ಹಾಗೂ ಮುಧೋಳ ತಾಲೂಕಿನ ಹಾಲಿ ಶಾಸಕರಿಗೆ ಹಾಗೂ ಬೆಳಗಲಿ ಪಟ್ಟಣದ ಪಂಚಾಯ್ತಿ ಅಧಿಕಾರಿಗಳು, ಚೇರ್ಮನ್ ಹಾಗೂ ಸದಸ್ಯರು, 17ನೇ ವಾರ್ಡ್ ಸದಸ್ಯರಿಗೆ ತಿಳಿಸುವುದೇನೆಂದರೆ ನಮ್ಮ ಬೀದಿ, ರಸ್ತೆ ಜಲಾವೃತವಾಗಿದೆ. ಬೆಳಗಲಿಯಿಂದ ಚಿಮ್ಮಡ ರಸ್ತೆ ಹಾಳಾಗಿದೆ. 3 ದಿನಗಳಿಂದ ನೀರು ಸತತವಾಗಿ ಹರಿದು ಬರುತ್ತಿದೆ. ಯಾರು ಕೂಡ ಈ ರಸ್ತೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನೀವು ನಿಜವಾಗಲೂ ಜನ ಸೇವೆ ಮಾಡಲು ಪ್ರಮಾಣ ಮಾಡಿದ್ದರೆ, ನೀವು ರಾಜಕಾರಣಿಗಳಾಗಿದ್ದರೆ ಒಂದು ರಸ್ತೆ ಕೂಡ ಮಾಡಲು ಆಗದವರು ನೀವ್ಯಾಕೆ ಯಾಕೆ ಜನಪ್ರತಿನಿಧಿಯಾಗಬೇಕು? ದಯವಿಟ್ಟು ಇದನ್ನ ಎಲ್ಲರಿಗೂ ಶೇರ್ ಮಾಡಿ, ಎಂಎಲ್‍ಎ ಅವರಿಗೆ ತಲುಪುವ ತನಕ ಶೇರ್ ಮಾಡಿ ಎಂದು ಬಾಲಕಿ ಹೇಳಿದ್ದಾಳೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದ್ದಂತೆಯೇ ಮೊದಲು ಪ್ರತಿಕ್ರಿಯಿಸಲು ನಿರಾಕರಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಯಾರೋ ಬಾಲಕಿ ಮೂಲಕ ಪತ್ರ ಓದಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ. ಅಲ್ಲಿ ಯಾವುದೇ ರೀತಿಯ ಪ್ರವಾಹ ಉಂಟಾಗಿಲ್ಲ. ರಸ್ತೆಯಲ್ಲಿ ನೀರು ನಿಂತಿದೆಯಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಮುಧೋಳ ತಾಲೂಕಿನ ರನ್ನ ಬೆಳಗಲಿ ಪ್ರವಾಹಕ್ಕೆ ಒಳಗಾಗಿಲ್ಲ, ಅದು ಕೋಡಿಹಾಳ ರಸ್ತೆ ರೈತರ ಹೊಲಗಳಿಗೆ ಹಾಗೂ ಸಣ್ಣ ಜನ ವಸತಿ ಇರುವ ಜಾಗಕ್ಕೆ ಹೋಗುವ ರಸ್ತೆ. ಅಲ್ಲಿ ಕೇವಲ ಮಳೆ ನೀರು ನಿಂತಿದೆ, ಪ್ರವಾಹ ಉಂಟಾಗಿಲ್ಲ. ಯಾರೋ ಒಬ್ಬರು ಈ ಪತ್ರವನ್ನು ಮಗುವಿನ ಕಡೆಯಿಂದ ಓದಿಸಿದ್ದಾರೆ. ಅಲ್ಲದೆ ಅದು ಪಿಡಬ್ಲ್ಯೂಡಿ ರಸ್ತೆಯಲ್ಲ ಪಟ್ಟಣ ಪಂಚಾಯಿತಿಗೆ ಸೇರಿದ ರಸ್ತೆ. ನಾನು ನಾಳೆ ಕ್ಷೇತ್ರಕ್ಕೆ ಹೊರಟಿದ್ದೇನೆ. ನೀವು ಬರುವುದಾದರೆ ಬೆಳಗಲಿಗೇ ಬನ್ನಿ. ನೀವೇ ಬಂದು ಬೆಳಗಲಿಯಲ್ಲಿ ನೋಡಿ, ಅಲ್ಲಿ ಸಮಸ್ಯೆ ಆಗಿಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *