ಮುನ್ನೆಲೆಗೆ ಬಂದ ಕಿರಿಯ ಪುತ್ರನ ವರ್ಚಸ್ಸು- ಬಿಎಸ್‍ವೈ ನಿವಾಸದಲ್ಲಿ ಹೋಮ-ಹವನ

Public TV
1 Min Read

ಬೆಂಗಳೂರು: ಕ್ಷೇತ್ರಗಳ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಮೇಲೆ ಯಡಿಯೂರಪ್ಪ ಅವರ ಬಲ ಪಕ್ಷದೊಳಗೂ ಪಕ್ಷದ ಹೊರಗೂ ವೃದ್ಧಿಸಿದೆ. ಈಗ ಯಡಿಯೂರಪ್ಪನವರು ಸರ್ಕಾರ ಮತ್ತು ಪಕ್ಷದಲ್ಲಿ ತಮ್ಮ ಹಳೆಯ ವರ್ಚಸ್ಸನ್ನು ಮರಳಿ ಪಡೆದಿದ್ದಾರೆ. ಆದರೆ ಇದರ ಬೆನ್ನಲ್ಲೇ ಯಡಿಯೂರಪ್ಪ ಅವರಿಗೆ ಶತ್ರುಗಳ ಆತಂಕವೂ ಹೆಚ್ಚಾಗಿದೆ. ಈ ಉಪಚುನಾವಣೆಯಲ್ಲಿ ತಮ್ಮ ಜೊತೆ ತಮ್ಮ ಕಿರಿಯ ಪುತ್ರ ಬಿವೈ ವಿಜಯೇಂದ್ರರ ವರ್ಚಸ್ಸು, ಸಾಮರ್ಥ್ಯ  ಕೂಡ ಮುನ್ನೆಲೆಗೆ ಬಂದಿದ್ದೇ ಯಡಿಯೂರಪ್ಪ ಅವರ ಆತಂಕಕ್ಕೆ ಕಾರಣ.

ಇದೀಗ ತಮ್ಮ ಆತಂಕ ದೂರ ಮಾಡಿಕೊಳ್ಳಲು ಸಿಎಂ ಯಡಿಯೂರಪ್ಪ ಅವರು ಹೊಪಮ-ಹವನದ ಮೊರೆ ಹೋಗಿದ್ದಾರೆ. ತಮಗೂ ತಮ್ಮ ಕಿರಿಯ ಮಗ ಬಿವೈ ವಿಜಯೇಂದ್ರಗೂ ರಾಜಕೀಯವಾಗಿ ವಿರೋಧಿಗಳಿಂದ ಎದುರಾಗುವ ಕಂಟಕಗಳ ನಿವಾರಣೆಗೆ ಯಡಿಯೂರಪ್ಪನವರು ಸುದರ್ಶನ ನರಸಿಂಹ ಹೋಮ ನಡೆಸಿದ್ದಾರೆ.

ಇಂದು ಮುಂಜಾನೆಯಿಂದ ಸತತ ಮೂರು ಗಂಟೆಗಳ ಕಾಲ ಕುಟುಂಬದ ಅರ್ಚಕರನ್ನು ಕರೆಸಿ ಯಡಿಯೂರಪ್ಪನವರು ಸುದರ್ಶನ ಹೋಮ ನಡೆಸಿದರು. ಈ ಹೋಮದಲ್ಲಿ ಬಿ ವಿ ವಿಜಯೇಂದ್ರ ದಂಪತಿ ಮಾತ್ರ ಪಾಲ್ಗೊಂಡಿದ್ದು ವಿಶೇಷ. ಧವಳಗಿರಿ ನಿವಾಸದಲ್ಲಿ ನಡೆದ ಸುದರ್ಶನ ಹೋಮದಲ್ಲಿ ಅಪ್ಪ-ಮಗ ಇಬ್ಬರೂ ಶ್ವೇತ ವರ್ಣದ ರೇಷ್ಮೆ ಪಂಚೆ, ಶಲ್ಯ, ಅಂಗಿ ತೊಟ್ಟು ಭಾಗವಹಿಸಿದ್ರು. ಹೋಮ ನಡೆಸಿದ ಅವಧಿಯಲ್ಲಿ ಧವಳಗಿರಿ ನಿವಾಸಕ್ಕೆ ಯಾವುದೇ ಸಚಿವರು, ಶಾಸಕರು, ಮುಖಂಡರು, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಅಷ್ಟೇ ಅಲ್ಲ ಆಪ್ತ ಸಹಾಯಕರು, ಅಧಿಕಾರಿಗಳಿಗೂ ಪ್ರವೇಶ ಕೊಟ್ಟಿರಲಿಲ್ಲ.

ಸುದರ್ಶನ ನರಸಿಂಹ ಹೋಮ ನಡೆಸುವ ಮೂಲಕ ಯಡಿಯೂರಪ್ಪ ತಮಗೆ ಮತ್ತು ಮಗ ವಿಜಯೇಂದ್ರಗೆ ಎದುರಾಗುವ ಶತ್ರು ಸಂಕಷ್ಟಗಳನ್ನು ಪರಿಹರಿಸಿಕೊಂಡರು. ಉಳಿದ ಅವಧಿಗೆ ಯಾವ ಅಡೆತಡೆಯೂ ಎದುರಾಗದಂತೆ ದೇವರಲ್ಲಿ ಬೇಡಿಕೊಂಡರು. ಶತ್ರು ನಿಗ್ರಹಕ್ಕಾಗಿ ಯಡಿಯೂರಪ್ಪ ನಡೆಸಿದ ಈ ಹೋಮ ಸದ್ಯ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

Share This Article
Leave a Comment

Leave a Reply

Your email address will not be published. Required fields are marked *