ಪೇಜಾವರಶ್ರೀ ಹೆಸರು ಮುದ್ರಿಸಿ ಕ್ರೈಸ್ತ ಮತಾಂತರ: ಶಿಷ್ಯವರ್ಗ ಆಕ್ರೋಶ

Public TV
1 Min Read

ಉಡುಪಿ: ಕ್ರೈಸ್ತಮತ ಪ್ರಚಾರಕ ವಸಂತ ಪೈ ಪೇಜಾವರ ಸ್ವಾಮೀಜಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಉಡುಪಿಯಲ್ಲಿರುವ ಸ್ವಾಮೀಜಿ ಶಿಷ್ಯ ವರ್ಗವು ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ವಸಂತ ಪೈ ಹೆಸರಿನಲ್ಲಿ ಕೆಲವು ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಗೋಡೆಗಳಿಗೂ ಅಂಟಿಸಿ ಪ್ರಚಾರ ಮಾಡಲಾಗುತ್ತಿದೆ. ಜೆ.ಪಿ.ನಗರದ, ರಾಯಲ್ ಪ್ರೀಸ್ಟ್ ವುಡ್ ಚರ್ಚ್ ನ ಈ ಪ್ರಕಟಣೆ ಪ್ರಕಾರ ವಸಂತ ಪೈ ಪೇಜಾವರ ಶ್ರೀಗಳ ಸಹೋದರನಂತೆ. ಆತನೇ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾನಂತೆ. ಉಡುಪಿಯ ಕೃಷ್ಣಮಠದ ಹಸರನ್ನೂ ಈ ಭಿತ್ತಿಪತ್ರದಲ್ಲಿ ಬಳಸಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ವಸಂತ ಪೈ ಪೇಜಾವರ ಸ್ವಾಮೀಜಿಗಳ ಸಹೋದರನೇ ಅಲ್ಲ. ಆ ವ್ಯಕ್ತಿ ಯಾರೆಂದು ಪೇಜಾವರ ಸ್ವಾಮೀಜಿಗೂ ತಿಳಿದಿಲ್ಲ. ಈ ರೀತಿಯ ವಾಮಮಾರ್ಗ ಬಳಸಿ ಕ್ರೈಸ್ತ ಮತ ಪ್ರಚಾರ ನಡೆಸುತ್ತಿರುವುದು ಅತ್ಯಂತ ಖಂಡನೀಯ ಎಂದು ಗುಡುಗಿದ್ದಾರೆ.

ಪೇಜಾವರ ಸ್ವಾಮೀಜಿ ಜೀವನಪರ್ಯಂತ ಗೋಹತ್ಯೆ, ಮತಾಂತರ, ಜಿಹಾದಿ ಉಗ್ರವಾದದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆಸಿದವರು. ತಿರುಪತಿಯಲ್ಲೂ ಮತಾಂತರದ ಕುತಂತ್ರಗಳು ನಡೆದಾಗ ದೇಶಾದ್ಯಂತ ಸಾಧು ಸಂತರನ್ನು ಸಂಘಟಿಸಿ ಹೋರಾಡಿದವರು. ಶ್ರೀಗಳ ಹೆಸರನ್ನು ಬಳಸಿ ಹಿಂದೂ ಸಮಾಜವನ್ನು ಒಡೆಯಲು ಕುತಂತ್ರ ನಡೆಯುತ್ತಿದೆ ಎಂದು ಹಿಂದೂ ಮುಖಂಡ ವಾಸುದೇವ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾಮೀಜಿಗಳ ಹೆಸರನ್ನೇ ತಮ್ಮ ಮತಪ್ರಚಾರಕ್ಕೆ ಬಳಸಿಕೊಳ್ಳುವ ತಂತ್ರವು ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ. ವಸಂತ ಪೈ ಹಾಗೂ ಆತನ ಹಿಂದೆ ಇರುವ ವ್ಯಕ್ತಿಗಳ ವಿರುದ್ಧ ಹೋರಾಟ ನಡೆಸಲಾಗುವುದು. ಪೊಲೀಸರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಾಸುದೇವ ಭಟ್ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *