ಪರಾರಿಯಾಗುತ್ತಿದ್ದ ಆರ್‌ಸಿಬಿಯ ನಿಖಿಲ್‌ ಸೋಸಲೆ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌

Public TV
2 Min Read

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium Stampede Case) ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗುತ್ತಿದ್ದ ಆರ್‌ಸಿಬಿಯ (RCB) ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆಯನ್ನು (Nikhil Sosale) ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಲಾಗಿದೆ.

ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಪಾರಾಗಲು ನಿಖಿಲ್‌ ಸೋಸಲೆ ಮುಂಬೈಗೆ ಪ್ರಯಾಣಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲೇ ಬೆಂಗಳೂರು ಪೊಲೀಸರು ವಿಮಾನ ನಿಲ್ದಾಣಕ್ಕೆ ತೆರಳಿ ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಕೇಸ್‌ | ಸಿಎಂ ಕೊಟ್ಟ ಸುಳಿವಿನಿಂದ ಪ್ರಮುಖ ಆರೋಪಿಗಳು ಪರಾರಿ

 

ಬಂಧನ ಮಾಡಿದ್ದು ಯಾಕೆ?
ಬೆಂಗಳೂರಿನಲ್ಲಿ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ವಿಕ್ಟರಿ ಪರೇಡ್ ನಡೆಯಲಿದೆ ಎಂದು ಆರ್‌ಸಿಬಿಯ ಸಾಮಾಜಿಕ ಜಾಲತಾಣ ಖಾತೆಯಿಂದ ಪೋಸ್ಟ್‌ ಮಾಡಲಾಗಿತ್ತು. ಬೆಂಗಳೂರು ಪೊಲೀಸರ ಅನುಮತಿ ಪಡೆಯದೇ ಬುಧವಾರ ಬೆಳಗ್ಗೆ ಈ ಪೋಸ್ಟ್‌ ಪ್ರಕಟವಾಗಿತ್ತು.

ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಅವರು ಪರೇಡ್‌ಗೆ ಅನುಮತಿ ನಿರಾಕರಿಸಿದ ನಂತರವೂ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ ಡಿಲೀಟ್‌ ಆಗಿರಲಿಲ್ಲ. ಅಷ್ಟೇ ಅಲ್ಲದೇ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಣೆಗೆ ಉಚಿತ ಟಿಕೆಟ್‌ ಎಂದು ಪೋಸ್ಟ್‌ ಮಾಡಲಾಗಿತ್ತು. ಇದನ್ನೂ ಓದಿ: Stampede Case | ಸಿಎಂ ಸೂಚನೆ ಬೆನ್ನಲ್ಲೇ ನಾಲ್ವರು ಅರೆಸ್ಟ್‌, ಉಳಿದವರು ಎಸ್ಕೇಪ್‌

 

ಉಚಿತ ಟಿಕೆಟ್‌ ಎಂದು ಘೋಷಣೆಯ ಬಳಿಕ ಟಿಕೆಟ್‌ ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಯಾರ ಬಳಿಯೂ ಇರಲಿಲ್ಲ. ನಂತರ ಗೇಟ್‌ 9 ಮತ್ತು 10 ರ ಬಳಿ ಮಧ್ಯಾಹ್ನ 1 ಗಂಟೆಯ ನಂತರ ಟಿಕೆಟ್‌ ಸಿಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಮಧ್ಯಾಹ್ನ 1 ಗಂಟೆಯಾದರೂ ಟಿಕೆಟ್‌ ವಿತರಣೆ ಪ್ರಕ್ರಿಯೆ ನಡೆದಿರಲಿಲ್ಲ. ಈ ಮಧ್ಯೆ ಮಧ್ಯಾಹ್ನ 3:14ಕ್ಕೆ ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ ಸಿಗಲಿದೆ ಎಂದು ಪೋಸ್ಟ್‌ ಮಾಡಲಾಗಿತ್ತು.

ನಿಖಿಲ್ ಸೂಚನೆಯಂತೆ ಇವೆಂಟ್‌ ಮ್ಯಾನೆಜ್‌ಮೆಂಟ್‌ ಕಂಪನಿ ಡಿಎನ್‌ಎ ಕೆಲಸ ಮಾಡುತ್ತಿತ್ತು. ಸಂಜೆಯ ವೇಳೆ ನಿಖಿಲ್‌ ಸೂಚನೆಯಂತೆ ದಿಢೀರ್‌ ಆಗಿ 22 ಗೇಟ್‌ಗಳ ಪೈಕಿ ಕೇವಲ 19,20,22 ಗೇಟ್‌ಗಳನ್ನು ಮಾತ್ರ ಓಪನ್‌ ಮಾಡಲಾಗಿತ್ತು. ಇದರಿಂದಾಗಿ ಕಾಲ್ತುಳಿತ ಸಂಭವಿಸಿತ್ತು.

ಬೆಳಗ್ಗೆಯಿಂದಲೂ ಸ್ಟೇಡಿಯಂ ಸುತ್ತ ಲಕ್ಷಾಂತರ ಜನ ಸೇರಲು ಆರ್‌ಸಿಬಿ ವಿಕ್ಟರಿ ಪೋಸ್ಟ್‌ ನೇರ ಕಾರಣವಾಗಿರುವ ಕಾರಣ ಬಂಧನ ಮಾಡಲಾಗಿದೆ.

Share This Article