ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಪಯಣ ಮುಗಿಸಿದ ಚಿಮೂ

Public TV
2 Min Read

ಬೆಂಗಳೂರು: 2018ನೇ ಸಾಲಿನ ಡಾ. ಎಂ.ಎಂ ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ ಸ್ವೀಕರಿಸಿ, ಖುಷಿ ಪಡುವ ಮೊದಲೇ ರಾಜ್ಯ ಕಂಡ ಶ್ರೇಷ್ಠ ಸಂಶೋಧಕ, ಚಿಂತಕ, ಸಾಹಿತಿ ಡಾ.ಎಂ. ಚಿದಾನಂದಮೂರ್ತಿ ನಮ್ಮನ್ನ ಅಗಲಿದ್ದಾರೆ.

ಚಿದಾನಂದಮೂರ್ತಿ ಅವರು 2018ನೇ ಸಾಲಿನ ಡಾ. ಎಂ.ಎಂ ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಫೆಬ್ರವರಿ 11ರಂದು ಪ್ರಶಸ್ತಿ ಸಮಾರಂಭ ನಿಗದಿಯಾಗಿತ್ತು. 15 ದಿನಗಳ ಹಿಂದೆಯೇ ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜನವರಿ 8ರಂದು ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆಮಂತ್ರಣ ಪತ್ರಿಕೆಯನ್ನು ಕೂಡ ಮುದ್ರಣಕ್ಕೆ ಕಳುಹಿಸಲಾಗಿತ್ತು. ಆದರೆ ಅಂದು ಭಾರತ್ ಬಂದ್ ಇತ್ತು. ಹೀಗಾಗಿ ಕಾರ್ಯಕ್ರಮವನ್ನ ಕೊನೆಯ ಹಂತದಲ್ಲಿ ಮುಂದೂಡಲಾಗಿತ್ತು.

ಈ ಕಾರ್ಯಕ್ರಮವನ್ನ ಫೆಬ್ರವರಿ 11ರಂದು ನಿಗದಿ ಮಾಡಲಾಗಿತ್ತು. ಆದರೆ ಇದೀಗ ಪ್ರಶಸ್ತಿ ಪಡೆಯಲು ಚಿಮೂ ಅವರೇ ಇಲ್ಲವಾಗಿದ್ದಾರೆ. ಈ ಪ್ರಶಸ್ತಿಯು 75 ಸಾವಿರ ನಗದು, ಫಲಕ, ಸ್ಮರಣಿಕೆ ಒಳಗೊಂಡಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ಅವರು ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದರು. ಆದರೆ ವಿಧಿಯ ಆಟ ಬಲ್ಲವರ‍್ಯಾರು ಎನ್ನುವಂತೆ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಚಿದಾನಂದಮೂರ್ತಿ ಅವರು ತಮ್ಮ ಪಯಣ ಮುಗಿಸಿದ್ದಾರೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕೆ ದೊಡ್ಡ ದನಿಯಾಗಿ ದುಡಿದಿದ್ದ, ತಮ್ಮ ಸಂಶೋಧನೆಗಳ ಮೂಲಕ ಇತಿಹಾಸದ ಪಾಠ ಮಾಡಿದ್ದ ಚಿಮೂ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ವೀರಶೈವ ಸಮುದಾಯಕ್ಕೆ ಸೇರಿದ್ದರೂ ಯಾವುದೇ ವಿಧಿವಿಧಾನಗಳಿಲ್ಲದೇ ಸಂಶೋಧಕ ಡಾ.ಎಂ ಚಿದಾನಂದ ಮೂರ್ತಿ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ. ತಮ್ಮ ಅಂತ್ಯಸಂಸ್ಕಾರವನ್ನು ವಿದ್ಯುತ್ ಚಿತಾಗಾರದಲ್ಲೇ ಮಾಡಬೇಕು ಅನ್ನೊದು ಚಿದಾನಂದಮೂರ್ತಿ ಅವರ ಆಸೆಯಾಗಿತ್ತು. ಹೀಗಾಗಿ ತಂದೆಯ ಆಸೆಯನ್ನ ಪುತ್ರ ವಿನಯ್ ಕುಮಾರ್ ಚಾಚೂ ತಪ್ಪದೇ ಪಾಲಿಸಿ, ಪ್ರೀತಿಯ ಅಪ್ಪನ ಹಣೆಗೆ ಮುತ್ತಿಟ್ಟು ಬೀಳ್ಕೊಟ್ಟರು. ಅಂತ್ಯಸಂಸ್ಕಾರ ಮಾಡುವ ಮುನ್ನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ವಿ.ಸೋಮಣ್ಣ, ಶಾಸಕ ಮುನಿರತ್ನ ಸೇರಿದಂತೆ ಹಲವು ಗಣ್ಯರು ಸಾಹಿತಿಯ ಅಂತಿಮ ದರ್ಶನ ಪಡೆದರು.

ಚಿದಾನಂದಮೂರ್ತಿ ಅವರ ಅಭಿಮಾನಿಗಳು, ಸಂಬಂಧಿಕರು ಅಂತಿಮ ದರ್ಶನ ಪಡೆದರು. ತದನಂತರ ಸರ್ಕಾರಿ ಗೌರವಗಳನ್ನು ಅರ್ಪಿಸಲಾಯಿತು. ಅಂತ್ಯಸಂಸ್ಕಾರ ಮಾಡುವ ವೇಳೆಯಲ್ಲಿ ಚಿದಾನಂದಮೂರ್ತಿ ಅವರು ಅಮರರಾಗಲಿ, ಸಿರಿಗನ್ನಡಂ ಗೆಲ್ಗೆ ಘೋಷಣೆಗಳನ್ನು ಅಭಿಮಾನಿಗಳು ಕೂಗಿದರು.

Share This Article
Leave a Comment

Leave a Reply

Your email address will not be published. Required fields are marked *