ಸಿಎಎ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಟಾರ್ಗೆಟ್ – ಸೂಲಿಬೆಲೆ, ತೇಜಸ್ವಿ ಕೊಲೆಗೆ ಸ್ಕೆಚ್

Public TV
2 Min Read

– ಸಿಸಿಬಿಯಿಂದ ಆರು ಮಂದಿ ಅರೆಸ್ಟ್

ಬೆಂಗಳೂರು: ಮಂಗಳೂರು ಮಾದರಿಯಲ್ಲೇ ಬೆಂಗಳೂರಲ್ಲೂ ಪೌರತ್ವ ಕಾಯ್ದೆ ಜನಜಾಗೃತಿ ವೇಳೆ ಹಿಂದೂ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಸಂಸದ ತೇಜಸ್ವಿ ಸೂರ್ಯ, ಸೂಲಿಬೆಲೆ ಮುಗಿಸಲು ಡಿ. 22ರಂದು ಟೌನ್‍ಹಾಲ್ ಬಳಿ ಪ್ಲಾನ್ ನಡೆದಿತ್ತು. ಈ ಮೂಲಕ ಎಸ್‍ಡಿಪಿಐ ಜನಸಂದಣಿ ಮಧ್ಯೆಯೇ ರಕ್ತಪಾತಕ್ಕೆ ಮುಹೂರ್ತ ಫಿಕ್ಸ್ ಮಾಡಿತ್ತು ಎಂಬ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.

ಬಹಿರಂಗವಾಗಿದ್ದು ಹೇಗೆ?
ದೇಶಾದ್ಯಂತ ಪೌರತ್ವ ಕಾಯ್ದೆ ಜಾರಿ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಸಿಎಎ ಪರ ಜನಜಾಗೃತಿ ಹೊರಟಿದ್ದ ವರುಣ್ ಮೇಲೆ ಎಸ್‍ಡಿಪಿಐ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಿಂಬದಿಯಿಂದ ಎರಡು ಬೈಕ್ ನಲ್ಲಿ ಬಂದಿದ್ದ ಆರೋಪಿಗಳು ರಾಡ್ ಹಾಗೂ ಲಾಂಗ್ ಗಳಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಆರು ಜನ ಆರೋಪಿಗಳನ್ನ ಬಂಧಿಸಿದ್ದರು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಸ್ಫೋಟಕ ಸತ್ಯ ಬೆಳಕಿಗೆ ಬಂದಿದೆ.

ಇರ್ಫಾನ್, ಸೈಯದ್ ಅಕ್ಬರ್, ಸೈಯದ್ ಸಿದ್ಧಿಕ್, ಅಕ್ಬರ್ ಪಾಷಾ, ಸನಾ ಹಾಗೂ ಸಾಧಿಕ್ ಉಲ್ ಅಮೀನ್ ಬಂಧಿತ ಎಸ್‍ಡಿ ಪಿಐ ಕಾರ್ಯಕರ್ತರು. ಆರೋಪಿಗಳ ವಿಚಾರಣೆಯ ವೇಳೆ ವರುಣ್ ಮೇಲೆ ಹಲ್ಲೆಗೆ ವೈಯಕ್ತಿಕ ಕಾರಣವೇ ಇಲ್ಲ. ಆರೋಪಿಗಳಿಗೂ ವರುಣ್ ಗೂ ಸಂಬಂಧವೇ ಇಲ್ಲ. ಸಿಎಎ ಪರವಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಆತನ ಹತ್ಯೆಗೆ ಮುಂದಾಗಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.

ಜನಜಾಗೃತಿ ರ‍್ಯಾಲಿ ವೇಳೆ ಕಲ್ಲು ಕೂಡ ತೂರಲಾಗಿತ್ತು. ಕಲ್ಲುಗಳನ್ನು ತೂರಿ ಗುಂಪು ಚದುರಿಸುವ ಪ್ಲಾನ್ ಮಾಡಲಾಗಿತ್ತು. ಜನ ಚದುರುತ್ತಿದ್ದಂತೆ ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆಗೆ ಆಲೋಚಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

ಸಿಎಎ ಪರ ಸಭೆ ನಡೆದ ಸ್ಥಳದಲ್ಲಿ ಆರೋಪಿಗಳು ಏಳೆಂಟು ಕಲ್ಲುಗಳನ್ನು ಎಸೆದಿದ್ದರು. ಕಲ್ಲು ಬಿದ್ದಾಗ ಜನ ಚದುರುತ್ತಾರೆ ಆಗ ಒಬ್ಬಂಟಿಯಾಗುವ ಮುಖಂಡನನ್ನ ಕೊಲೆ ಮಾಡುವ ಪ್ಲಾನ್ ಮಾಡಿದ್ದರು. ಆರೋಪಿಗಳು ಎಸೆದ ಕಲ್ಲು ಬೇರೆ ಬೇರೆ ಕಡೆ ಬಿದ್ದಿದ್ದವು. ನಂತರ ಕೇಸರಿ ಬಟ್ಟೆ ಧರಿಸಿದ್ದ ಆರೋಪಿಗಳು ವರುಣ್ ನನ್ನು ಹಿಂಬಾಲಿಸಿದ್ದರು. ತಮ್ಮ ಇರುವಿಕೆ ಮರೆಮಾಚಲು ಮೊಬೈಲ್ ಆನ್ ಮಾಡಿ ಆರೋಪಿಗಳು ಮನೆಯಲ್ಲಿಯೇ ಬಿಟ್ಟು ಬಂದಿದ್ದರು. ಮುಖ ಚಹರೆ ಮರೆ ಮಾಚಲು ಹೆಲ್ಮೆಟ್ ಧರಿಸಿದ್ದರು. ಕೃತ್ಯಕ್ಕೆ ಬಳಸಿದ್ದ ವಾಹನಗಳ ನಂಬರ್ ಗಳನ್ನ ಕಪ್ಪು ಮಸಿ ಹಚ್ಚಿದ್ದರು. ಕೃತ್ಯದ ಸಮಯದಲ್ಲಿ ಎರಡರಿಂದ ಮೂರು ಟಿ ಶರ್ಟ್ ಧರಿಸಿದ್ದರು. ಕೃತ್ಯದ ನಂತರ ಎರಡು ಟಿ ಶರ್ಟ್ ಬಿಚ್ಚಿಹಾಕಿ ರಸ್ತೆ ಮಧ್ಯೆ ಪೆಟ್ರೋಲ್ ಹಾಕಿ ಸುಟ್ಟಿದ್ದರು. ಮಚ್ಚುಗಳನ್ನ ನೈಸ್ ರಸ್ತೆಯ ಅಂಚೆಪಾಳ್ಯ ಕೆರೆಗೆ ಬಿಸಾಕಿದ್ದರು. ಹೆಲ್ಮೆಟ್ ಗಳನ್ನ ರಾಮಮೂರ್ತಿನಗರದ ಹೊಂಡಕ್ಕೆ ಬಿಸಾಕಿದ್ದರು.

ಆರೋಪಿಗಳು ಎಸ್‍ಡಿಪಿಐ ನಿಂದ ತಿಂಗಳಿಗೆ ಹತ್ತು ಸಾವಿರ ಹಣ ಪಡೆಯುತ್ತಿದ್ದರು. ಅಲ್ಲದೆ ಸಮಾಜದಲ್ಲಿ ಸ್ವಾಸ್ಥ್ಯ ಹಾಳುಮಾಡುವಂತೆ ಸೂಚನೆ ಪಡೆದಿದ್ದರು ಎನ್ನುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *