ಬಜೆಟ್‍ನಲ್ಲಿ ಮಹದಾಯಿಗೆ ಹಣ ಬಿಡುಗಡೆ: ಬಿಎಸ್‍ವೈ ಭರವಸೆ

Public TV
2 Min Read

ಬೆಂಗಳೂರು: ಕೇಂದ್ರ ಸರ್ಕಾರದಿಂದ ಮಹದಾಯಿ ಯೋಜನೆ ಸಂಬಂಧ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಫುಲ್ ಆಕ್ಟೀವ್ ಆಗಿದೆ. ಯೋಜನೆಗೆ ಅಗತ್ಯವಾದ ಪ್ರಕ್ರಿಯೆಗಳನ್ನು ಪ್ರಾರಂಭ ಮಾಡಲು ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಅಲ್ಲದೆ ಯೋಜನೆಗಾಗಿ ಈ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡೋದಾಗಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಪ್ರಧಾನಿ ಮೋದಿ, ಅಮಿತ್ ಶಾ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಬಹಳ ವರ್ಷಗಳ ಬೇಡಿಕೆ ಈಡೇರಿಕೆ ಆಗಿದೆ. ಈ ಅಧಿಸೂಚನೆಯಿಂದ ಆ ಭಾಗದ ಜನರಿಗೆ ಕುಡಿಯುವ ನೀರು ಮತ್ತು ನೀರಾವರಿಗೆ ಅನುಕೂಲ ಆಗುತ್ತೆ ಅಂತ ತಿಳಿಸಿದರು. ಅಧಿಸೂಚನೆ ಹೊರಡಿಸಿರೋದರಿಂದ 13.5. ಟಿಎಂಸಿ ನೀರು ನಮಗೆ ಸಿಗುತ್ತೆ. ಈ ನೀರಿನಿಂದ ಆ ಭಾಗದ ಜನರಿಗೆ ಹೆಚ್ಚು ಅನುಕೂಲ ಆಗುತ್ತೆ ಅಂತ ತಿಳಿಸಿದರು.

ಮಹದಾಯಿಗಾಗಿ ಅನೇಕ ವರ್ಷಗಳು ಹೋರಾಟದ ಆಯ್ತು. ಹೋರಾಟದ ಫಲವಾಗಿ ಈ ಅಧಿಸೂಚನೆ ಆಗಿದೆ. ಮೋದಿ ಮತ್ತು ಅಮಿತ್ ಶಾ ಹೆಚ್ಚಿನ ಆಸಕ್ತಿಯಿಂದ ನೀರಾವರಿ ಸಚಿವರ ಮೇಲೆ ಒತ್ತಡ ತಂದು ಅಧಿಸೂಚನೆ ಹೊರಡಿಸಿದ್ದಾರೆ. ಈ ಬಜೆಟ್ ನಲ್ಲಿ ಹೆಚ್ಚು ಹಣ ನೀಡುತ್ತೇನೆ. ಆದಷ್ಟು ಬೇಗ ಕೆಲಸ ಪ್ರಾರಂಭ ಮಾಡ್ತೀನಿ ಅಂತ ಆ ಭಾಗದ ಜನರಿಗೆ ನಾನು ಭರವಸೆ ಕೊಡ್ತೀನಿ ಅಂತ ತಿಳಿಸಿದರು.

ಕೇಂದ್ರಕ್ಕೆ ಜೋಷಿ ಅಭಿನಂದನೆ:
ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪರನ್ನ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಜೋಷಿ, ಗುರುವಾರ ರಾತ್ರಿ ಕೇಂದ್ರ ಸರ್ಕಾರ ಮಹದಾಯಿ ಅಧಿಸೂಚನೆ ಹೊರಡಿಸಿದೆ. ಸುಪ್ರೀಂಕೋರ್ಟ್ ತೀರ್ಪು ಬಂದ ಒಂದೇ ವಾರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ಹೊರಡಿಸಲು ನಾವು ಕೆಲಸ ಮಾಡಿದ್ವಿ ಅಂತ ತಿಳಿಸಿದ್ರು. ಕರ್ನಾಟಕ ಸರ್ಕಾರ ಕೂಡ ಸುಪ್ರೀಂಕೋರ್ಟಿನಲ್ಲಿ ಉತ್ತಮವಾಗಿ ವಾದ ಮಾಡಿತ್ತು. ಕರ್ನಾಟಕ ಸರ್ಕಾರ ಮತ್ತು ಪ್ರಧಾನಿ ಮೋದಿ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‍ಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಅಂತ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *