ಹೈಕಮಾಂಡ್ ಮೆಸೇಜ್‍ಗಾಗಿ ತುದಿಗಾಲಲ್ಲಿ ಕಾಯ್ತಿರೋ ಸಿಎಂ

Public TV
1 Min Read

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಈ ತಿಂಗಳಾಂತ್ಯಕ್ಕೆ ಆಗುತ್ತಾ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆ ಇದೆ. ಇಂದು ದೆಹಲಿಯಲ್ಲಿ ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವಾಗ, ಯಾರು ಯಾರು ಮಂತ್ರಿಗಳಾಗುತ್ತಾರೆ ಎಂಬ ಸ್ಪಷ್ಟತೆ ಸಿಗುತ್ತೆ ಎನ್ನಲಾಗಿದೆ. ಅಷ್ಟೇ ಅಲ್ಲ ದೆಹಲಿಗೆ ಮುಖ್ಯಮಂತ್ರಿಗಳು ಹೋಗಬೇಕಾ, ಬೇಡವಾ ಅನ್ನೋ ಬಗ್ಗೆಯೂ ಇಂದೇ ತಿಳಿಯಲಿದೆ ಎನ್ನಲಾಗಿದೆ.

ಮೊನ್ನೆಯಷ್ಟೇ ಬಿ.ಎಲ್ ಸಂತೋಷ್ ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಈ ಮಾತುಕತೆಯಲ್ಲಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಕುರಿತು ತಮ್ಮ ಪ್ರಸ್ತಾವನೆಯನ್ನು ಇಟ್ಟಿದ್ರು. ಇಂದು ಜೆ.ಪಿ ನಡ್ಡಾರವರ ಜೊತೆ ಸಂತೋಷ್ ನಡೆಸುವ ಮಾತುಕತೆಯಲ್ಲಿ ಯಡಿಯೂರಪ್ಪ ಅವರ ಪ್ರಸ್ತಾವನೆ, ಸಂಭಾವ್ಯರ ಪಟ್ಟಿ ಕುರಿತು ಚರ್ಚೆ ನಡೆಯಲಿದ್ದು, ಎಲ್ಲ ಗೊಂದಲಗಳಿಗೂ ಉತ್ತರ ಸಿಗಲಿದೆ ಎನ್ನಲಾಗಿದೆ.

ಮಾತುಕತೆ ಬಳಿಕ ಸಿಎಂ ಯಡಿಯೂರಪ್ಪ ಅವರಿಗೆ ಜೆ.ಪಿ ನಡ್ಡಾ ಅವರೇ ಸಂದೇಶ ಕಳಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಜೆ.ಪಿ ನಡ್ಡಾ ಅವರಿಂದ ಯಾವ ರೀತಿಯ ಸಂದೇಶ ಬರಬಹುದೆಂಬ ನಿರೀಕ್ಷೆ, ಕಾತರ, ಆತಂಕ ಯಡಿಯೂರಪ್ಪ ಅವರಲ್ಲಿ ಸದ್ಯ ಮನೆ ಮಾಡಿದೆ. ದೆಹಲಿಗೆ ಬುಲಾವ್ ಬಂದರೆ ಒಂದು ಕ್ಷಣವೂ ತಡಮಾಡದೇ ಯಡಿಯೂರಪ್ಪ ಹೊರಡಲಿದ್ದಾರೆ. ಈ ನಿರೀಕ್ಷೆಯಲ್ಲೇ ಇವತ್ತು ಕೆ.ಆರ್ ನಗರ ಮತ್ತು ಮಡಿಕೇರಿಗಳಲ್ಲಿ ನಿಗದಿಯಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *