ದೊಡ್ಡವ್ರ ಅಪಘಾತಕ್ಕೆ ಹೊಸ ಟ್ವಿಸ್ಟ್ – ಜೀಪ್‍ನಲ್ಲಿ ಬಂದು ಆಟೋದಲ್ಲಿ ಹೋದ ಇಬ್ಬರು ವ್ಯಕ್ತಿಗಳು ಯಾರು?

Public TV
2 Min Read

– ಸಿಸಿಟಿವಿ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯ

ಬಳ್ಳಾರಿ: ದೊಡ್ಡವರ ಮಕ್ಕಳು ಮಾಡಿದ ಬಳ್ಳಾರಿ ಅಪಘಾತಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಪ್ರಮುಖ ಸಿಸಿಟಿವಿ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದರಿಂದ ಜೀಪ್‍ನಲ್ಲಿ ಬಂದು ಆಟೋದಲ್ಲಿ ಹೋದ ‘ಆ ಇಬ್ಬರು’ ಯಾರು ಎಂಬ ಅತಿ ದೊಡ್ಡ ಪ್ರಶ್ನೆ ಎದ್ದಿದೆ.

ಫೆಬ್ರವರಿ 10 ರಂದು ಬಳ್ಳಾರಿಯ ಹೊಸಪೇಟೆಯ ಮರಿಯಮ್ಮನಹಳ್ಳಿಯ ಬಳಿ ಐಷಾರಾಮಿ ಕಾರೊಂದು ಆಕ್ಸಿಡೆಂಡ್ ಆಗಿ ಎರಡು ಜೀವಗಳು ಬಲಿಯಾಗಿದ್ದವು. ಈ ಪ್ರಕರಣದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರ ಪುತ್ರ ಶರತ್ ಅವರ ಹೆಸರು ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ಅಂದು ಖಾಸಗಿ ಆಸ್ಪತ್ರೆ ಬಳಿ ನಡೆದ ಘಟನೆ ಸಂಪೂರ್ಣ ಸಿಸಿಟಿವಿ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ದೃಶ್ಯ 1
ಅಪಘಾತ ಸಂಭವಿಸಿದ ದಿನ ಮಧ್ಯಾಹ್ನ 3.45ರ ಸುಮಾರಿಗೆ ಜೀಪಿನಲ್ಲಿ ಹೊಸಪೇಟೆ ಖಾಸಗಿ ಆಸ್ಪತ್ರೆಗೆ ಗಾಯಾಳು ಸಚಿನ್ ಅನ್ನು ಕರೆದುಕೊಂಡು ಬರಲಾಗುತ್ತದೆ. ನಂತರ ಜೀಪ್ ಬಳಿಯೇ ಬಂದ ವೈದ್ಯರು, ಜೀಪ್‍ನಲ್ಲಿದ್ದವರ ದೇಹಸ್ಥಿತಿ ನೋಡಿ ದಂಗಾಗಿ ಹೋಗುತ್ತಾರೆ. ಆನಂತರ ಚಿಕಿತ್ಸೆ ಕೊಡದೆ ವಾಪಸ್ ಕಳುಹಿಸುತ್ತಾರೆ.

ದೃಶ್ಯ 2
ಇದಾದ ನಂತರ ಮಧ್ಯಾಹ್ನ 3.47 ಸುಮಾರಿಗೆ ಖಾಸಗಿ ಆಸ್ಪತ್ರೆ ಪಕ್ಕದ ಗೂಡಂಗಡಿಯಲ್ಲಿ ಜೀಪಿನಲ್ಲಿ ಇದ್ದ ಇಬ್ಬರು ಚರ್ಚೆ ಮಾಡುತ್ತಾರೆ. ವೈದ್ಯರು ಚಿಕಿತ್ಸೆಗೆ ಒಪ್ಪದಿದ್ದಾಗ ಮುಂದೇನು ಅಂತ ಚರ್ಚೆ ಮಾಡುತ್ತಾರೆ. 3-4 ನಿಮಿಷ ಇಬ್ಬರ ಆಪ್ತ ಸಮಾಲೋಚನೆ ನಡೆಸಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

ದೃಶ್ಯ 3
ಪಬ್ಲಿಕ್ ಟಿವಿಗೆ ಸಿಕ್ಕಿ ಸಿಸಿಟಿವಿಯಲ್ಲಿ ಮಧ್ಯಾಹ್ನ 3.48 ವೇಳೆಗೆ ಗಾಯಾಳು ಸಚಿನ್ ಖಾಸಗಿ ವೈದ್ಯರ ಚಿಕಿತ್ಸೆ ಕೊಡಲು ನಕಾರ ಮಾಡಿದಾಗ, ಸರ್ಕಾರಿ ಆಸ್ಪತ್ರೆಗೆ ಜೀಪನ್ನು ತಿರುಗಿಸುತ್ತಾರೆ. ಖಾಸಗಿ ಆಸ್ಪತ್ರೆಗೆ ಬರುವ ಮಾರ್ಗದಲ್ಲೇ ಸಚಿನ್ ಮೃತಪಟ್ಟಿದ್ದ. ಹೀಗಾಗಿ ಜೀಪಿನಿಂದ ಇಳಿಸದೇ ಪರಿಶೀಲಿಸಿದ ಆಸ್ಪತ್ರೆ ವೈದ್ಯರು, ಪಲ್ಸ್ ನೋಡಿ ಸರ್ಕಾರಿ ಆಸ್ಪತ್ರೆಗೆ ತೆರಳಲು ಸೂಚನೆ ನೀಡುತ್ತಾರೆ. ಖಾಸಗಿ ಆಸ್ಪತ್ರೆಗೆ ಬಂದ ಕೇವಲ ಮೂರೇ ನಿಮಿಷಕ್ಕೆ ಜೀಪ್ ಅಲ್ಲಿಂದ ನಿರ್ಗಮಿಸುತ್ತೆ.

ದೃಶ್ಯ 4
ಈ ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯಾಕೆಂದರೆ ಮಧ್ಯಾಹ್ನ 3.50 ಜೀಪ್ ಖಾಸಗಿ ಆಸ್ಪತ್ರೆಯಿಂದ ಹೋದ ಮೇಲೆ ಜೀಪ್‍ನಲ್ಲಿ ಬಂದು ‘ಆ ಇಬ್ಬರು’ ಮಾತ್ರ ಜೀಪ್‍ನಲ್ಲಿ ಹೋಗುವುದಿಲ್ಲ. ಅದರ ಬದಲಿಗೆ ರಸ್ತೆಯಲ್ಲಿ ಆಟೋ ಸ್ಟ್ಯಾಂಡ್ ಕಡೆಗೆ ನಡೆದುಕೊಂಡು ಹೋಗಿ ಆಟೋ ಹತ್ತಿ ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಹಾಗಾದರೆ ಆಟೋದಲ್ಲಿ ಹೋದ `ಆ’ ಇಬ್ಬರು ಯಾರು? ಯಾರಿಗೂ ಅನುಮಾನ ಬಾರದಂತೆ ಆಟೋ ಹತ್ತಿದ್ಯಾಕೆ ಎಂಬ ಪ್ರಶ್ನೆಗಳು ಎದ್ದಿವೆ.

ಏನಿದು ಪ್ರಕರಣ?
ಕೆಎ-05, ಎಂಡಬ್ಲ್ಯು 357 ನಂಬರಿನ ಬೆಂಜ್ ಕಾರು ಬಳ್ಳಾರಿಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಇಬ್ಬರ ಬಲಿಯನ್ನು ತೆಗೆದುಕೊಂಡಿತ್ತು. ದುರ್ಗಾ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಸೇತುವೆ ಮೇಲಿನಿಂದ ವೇಗದಲ್ಲಿ ಬಂದ ಕಾರು ರಸ್ತೆ ಬದಿಯ ಚಹಾದ ಅಂಗಡಿ ಬಳಿ ನಿಂತಿದ್ದ ರವಿ ನಾಯಕ್(19) ಅವರಿಗೆ ಗುದ್ದಿದೆ. ನಂತರ ಕಾರು ಸುಮಾರು 100 ಮೀಟರ್ ದೂರದವರೆಗೆ ರವಿ ಅವರನ್ನು ಬೆಂಜ್ ಕಾರು ತಳ್ಳಿಕೊಂಡು ಹೋಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮತ್ತೀಕೆರೆ ನಿವಾಸಿ ಸಚಿನ್ ಮೃತಪಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *