ಬೆಂಗಳೂರು: ಕೊಲೆ ಆರೋಪಿ, ರೌಡಿಶೀಟರ್ ಮೇಲೆ ನಗರದ ಬೇಗೂರು ಪೊಲೀಸರು ಭಾನುವಾರ ಫೈರಿಂಗ್ ನಡೆಸಿ, ಬಂಧಿಸಿದ್ದಾರೆ.
ರೌಡಿಶೀಟರ್ ಶ್ರೀಧರ್ ಅಲಿಯಾಸ್ ಓಣಿ ಶ್ರೀಧರ್ ಬಂಧಿತ ಆರೋಪಿ. ಬೊಮ್ಮನಹಳ್ಳಿಯ ಓಂ ಶಕ್ತಿ ಲೇಔಟ್‍ನಲ್ಲಿ ಆಗಸ್ಟ್ 30ರಂದು ಆಟೋ ಸುನೀಲ್ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಶ್ರೀಧರ್ ಅಂಡ್ ಟೀಂ ಕೈವಾಡವಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.
ಬೇಗೂರಿನ ಕೊಪ್ಪ ಪ್ರದೇಶದಲ್ಲಿ ಶ್ರೀಧರ್ ಇರುವ ಖಚಿತ ಮಾಹಿತಿ ಬೇಗೂರು ಇನ್ಸ್‌ಪೆಕ್ಟರ್ ಮಂಜುನಾಥ್ ಅವರಿಗೆ ಲಭ್ಯವಾಗಿತ್ತು. ಆರೋಪಿಯ ಬಂಧನಕ್ಕೆ ಮಂಜುನಾಥ್ ಅವರ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಶ್ರೀಧರ್ ಕ್ರೈಂ ಸಿಬ್ಬಂದಿ ಮುಖ್ಯಪೇದೆ ರಾಮಚಂದ್ರರ ಮೇಲೆ ಲಾಂಗ್‍ನಿಂದ ಹಲ್ಲೆಗೆ ಮುಂದಾಗಿದ್ದ. ತಕ್ಷಣವೇ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ಆರೋಪಿ ಶ್ರೀಧರ್ ಮೇಲೆ ಫೈರಿಂಗ್ ನಡೆಸಿದ್ದಾರೆ.
ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ಹಾರಿಸಿದ ಗುಂಡು ಬಲಗಾಲಿಗೆ ತಗುಲಿ ಆರೋಪಿ ಶ್ರೀಧರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಬಂಧಿಸಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.