ಬೆಂಗ್ಳೂರಿಗರ ಕುಂದು ಕೊರತೆ ನಿವಾರಣೆಗೆ ಬಿಬಿಎಂಪಿ ಹೊಸ ಆ್ಯಪ್ – ಏನಿದು ಆ್ಯಪ್? ಕೆಲಸ ಹೇಗೆ?

Public TV
2 Min Read

ಬೆಂಗಳೂರು: ನಗರದ ನಾಗರೀಕರು ತಮ್ಮ ಕುಂದು ಕೊರತೆಗಳನ್ನು ದಾಖಲಿಸಲು ಹಾಗೂ ಪರಿಹರಿಸಲು ಸಹಾಯ ಎನ್ನುವ ತಂತ್ರಾಂಶವನ್ನ ಬಳಸಲಾಗುತ್ತಿದೆ. ಆದರೆ ಆ್ಯಪ್‍ನಿಂದ ನಿಗದಿತ ಸಮಯಕ್ಕೆ ಸಮಸ್ಯೆ ಪರಿಹಾರ ಸಿಗುತ್ತಿರಲಿಲ್ಲ ಮತ್ತು ಅಧಿಕಾರಿಗಳ ಗಮನಕ್ಕೆ ಬರುತ್ತಿರಲಿಲ್ಲ. ಸಮಸ್ಯೆ ಬಗೆಹರಿಸದಿದ್ದರೂ ಎಲ್ಲವೂ ಸರಿಯಾಗಿದೆ ಎಂದು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದರು. ಆದರೆ ಈಗ ಬೆಂಗಳೂರು ನಗರದ ನಾಗರೀಕರ ಕುಂದು ಕೊರತೆ ನಿವಾರಣೆಗೆ ಅಂತಾ ಬಿಬಿಎಂಪಿ ‘ಸಹಾಯ 2.0’ ಎಂಬ ಹೊಸ ಅವತರಣಿಕೆಯ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಈ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ತಂತ್ರಾಂಶ ಸ್ವಯಂಚಾಲಿತವಾಗಿದ್ದು, ಇದರ ಮೂಲಕ ದೂರುಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸ್ವಯಂಚಾಲಿತವಾಗಿ ತಲುಪಲಿದೆ ಎನ್ನಲಾಗಿದೆ.

ರಸ್ತೆಗುಂಡಿ, ಕಾಮಗಾರಿ ವಿಳಂಬ, ಮರ ತೆರವು, ಮಳೆ, ಬೀದಿನಾಯಿ ಹಾವಳಿ, ಸೊಳ್ಳೆಕಾಟ, ಒಳ ಚರಂಡಿ ಸ್ವಚ್ಛತೆ ಇನ್ನಿತರೆ ಯಾವುದೇ ಸಮಸ್ಯೆಗಳು ಇದ್ದರು ಈ ಆ್ಯಪ್ ಮೂಲಕ ದೂರುಗಳನ್ನ ನೀಡಿ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಬೆಂಗಳೂರಿನ ನಾಗರೀಕರು ವಿವಿಧ ಇಲಾಖೆಗಳಿಗೆ ಸಲ್ಲಿಸಬೇಕಾದ ದೂರಗಳನ್ನು ಒಂದೇ ತಂತ್ರಾಂಶದ ಮೂಲಕ ದಾಖಲಿಸಲು ‘ನಮ್ಮ ಬೆಂಗಳೂರು’ ಎಂಬ ತಂತ್ರಾಂಶವನ್ನು ಪಾಲಿಕೆ ವತಿಯಿಂದ ಸಿದ್ಧಪಡಿಸಲಾಗಿದೆ. ಇದರಲ್ಲಿ ಬಿಬಿಎಂಪಿ ಸೇರಿದಂತೆ ಬೆಸ್ಕಾಂ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲುಎಸ್‍ಎಸ್‍ಬಿ), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(ಬಿಎಂಆರ್‍ಸಿಎಲ್), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಇಲಾಖೆಯ ದೂರು ದಾಖಲಾತಿ ತಂತ್ರಾಂಶಗಳನ್ನು ಈ ನಮ್ಮ ಬೆಂಗಳೂರು ಆ್ಯಪ್‍ನಲ್ಲಿ ಸಮೀಕರಣಗೊಳಿಸಲಾಗಿದೆ. ಈ ಆ್ಯಪ್ ಮೂಲಕ ಸಾರ್ವಜನಿಕರು ಲಿಖಿತ ಛಾಯಾಚಿತ್ರ, ವಿಡಿಯೋ ಮತ್ತು ಸ್ಥಳಪರಿಸ್ಥಿತಿ ಬಗ್ಗೆ ವಿವರಣೆ ನೀಡುವ ಮೂಲಕ ಒಂದೇ ವೇದಿಕೆ ಮೂಲಕ ಹಲವಾರು ಇಲಾಖೆಗಳಿಗೆ ಸಂಬಂಧಿಸಿದ ದೂರಗಳನ್ನು ಈ ಆ್ಯಪ್ ಮೂಲಕ ನೀಡಬಹುದಾಗಿದೆ.

ಪ್ರಮುಖ ವೈಶಿಷ್ಟಗಳೇನು?
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ವಿವಿಧ ಮಾದರಿಯ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ವಯಂ ಚಾಲಿತವಾಗಿ ತಲುಪುವಂತೆ ಮಾಡುತ್ತದೆ.
* ಪಾಲಿಕೆಯ ಅಧಿಕಾರಿಗಳು ನೋಂದಾಯಿತ ದೂರುಗಳನ್ನು ಪರಿಣಾಮಕಾರಿಯಾಗಿ ವಿಲೇವಾರಿ ಮಾಡಲು ಅನುಕೂಲ.

* ಸಾರ್ವಜನಿಕರಿಂದ ದೂರು ದಾಖಲಾದ ತಕ್ಷಣದಿಂದಲೇ ಅಧಿಕಾರಿಗಳು ತಮ್ಮ ಮೋಬೈಲ್‍ನಲ್ಲಿ ದೂರಿನ ವಿವರವನ್ನು ವೀಕ್ಷಿಸಬಹುದು.* ದೂರನ್ನು ಪರಿಹರಿಸಿದ ನಂತರ ಛಾಯಾಚಿತ್ರವನ್ನು ಸಾರ್ವಜನಿಕರಿಗೆ ತಲುಪಿಸುವಂತಹ ಅವಕಾಶವನ್ನು ಕಲ್ಪಿಸಲಾಗಿದೆ.
* ಅಧಿಕಾರಿಗಳಿಗೆ ದೂರಿನ ನಿರ್ಧಿಷ್ಟ ಸ್ಥಳವನ್ನು ಗೂಗಲ್ ನಕ್ಷೆಯ ಮೂಲಕ ಗುರುತಿಸುವ ವ್ಯವಸ್ಥೆ
* ಸಮಯ ಮೀರಿದ ದೂರುಗಳನ್ನು ಮೇಲಾಧಿಕಾರಿಗಳಿಗೆ ತಲುಪಿಸುವ ವ್ಯವಸ್ಥೆ.

Share This Article
Leave a Comment

Leave a Reply

Your email address will not be published. Required fields are marked *