3 ವರ್ಷಗಳ ನಂತರ ಬೆಂಗಳೂರಿನ ಎಟಿಎಂ ಹಲ್ಲೆಕೋರ ಅರೆಸ್ಟ್

Public TV
1 Min Read

ಬೆಂಗಳೂರು: ನಗರದ ಎಟಿಎಂವೊಂದರಲ್ಲಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎಟಿಎಂನಲ್ಲಿ ಹಣ ತಗೆಯಲು ಬಂದಿದ್ದ ಜ್ಯೋತಿ ಉದಯ್ ಎಂಬ ಮಹಿಳೆಯ ಮೇಲೆ ದುಷ್ಕರ್ಮಿಯೊಬ್ಬ ಮಚ್ಚಿನಿಂದ ಹಲ್ಲೆ ಮಾಡಿ ಹಣ ಕಸಿದು ಪರಾರಿಯಾಗಿದ್ದ. ಈ ಭಯಾನಕ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಘಟನೆ ಬಗ್ಗೆ ಎಸ್‍ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಮೂರು ವರ್ಷಗಳ ನಂತರ ನಗರ ಕೆಂದ್ರ ವಿಭಾಗದ ಪೊಲೀಸರು, ಶಂಕಿತ ಆರೋಪಿಯನ್ನು ಆಂಧ್ರದ ಮದನಪಲ್ಲಿಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಗೌಪ್ಯ ಸ್ಥಳದಲ್ಲಿರಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಅಂದು ಏನಾಗಿತ್ತು?: 2013ರ ನವೆಂಬರ್ 19ರಂದು ಬೆಳಗ್ಗೆ ಬೆಂಗಳೂರಿನ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿನ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಕಾರ್ಪೊರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಅಪರಿಚಿತ ವ್ಯಕ್ತಿ ಎಲ್‍ಐಸಿ ಕಟ್ಟಡದಲ್ಲಿರುವ ಎಟಿಎಂನಲ್ಲಿ ಹಲ್ಲೆ ನಡೆಸಿದ್ದ.

ಹಲ್ಲೆ ನಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೃತ್ಯ ನಡೆದು 3 ವರ್ಷ ಕಳೆದಿದ್ದರೂ ಆರೋಪಿ ಸಿಕ್ಕಿರಲಿಲ್ಲ. ಹಲ್ಲೆಯಿಂದ ಗಾಯಗೊಂಡಿದ್ದ ಜ್ಯೋತಿ ಉದಯ್ ಅವರು ಕೆಲವು ತಿಂಗಳ ಕಾಲ ಚಿಕಿತ್ಸೆ ಪಡೆದು, ಗುಣಮುಖರಾಗಿ ಬ್ಯಾಂಕಿನಲ್ಲಿ ಕೆಲಸ ಮುಂದುವರಿಸಿದ್ದಾರೆ.

ಆರೋಪಿಯ ಬಗ್ಗೆ ಸುಳಿವು ಕೊಟ್ಟವರಿಗೆ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *