ಅಮೆರಿಕದಿಂದ ವಾಪಸ್ಸಾದ ಬೆನ್ನಲ್ಲೇ ದೂರು ಆಲಿಸಲಿರುವ ಸಿಎಂ – ಬೇಡಿಕೆಗಳ ಪಟ್ಟಿಯೊಂದಿಗೆ ಕೈ ಶಾಸಕರು ರೆಡಿ

Public TV
2 Min Read

– ಇಡಿ ಭೀತಿಯಲ್ಲಿ ಜಮೀರ್ ಸೈಲೆಂಟ್

ಬೆಂಗಳೂರು: ಇಬ್ಬರು ಶಾಸಕರ ರಾಜೀನಾಮೆ ಬೆನ್ನಲ್ಲೇ ಸರ್ಕಾರ ಉಳಿಸಿಕೊಳ್ಳುವ ಸಂಕಷ್ಟದಲ್ಲಿರುವ ಸಿಎಂ ಮುಂದೆ ಕಾಂಗ್ರೆಸ್‍ನ ಶಾಸಕರು ಬೇಡಿಕೆಗಳು ಮತ್ತು ದೂರಿನ ಪಟ್ಟಿಯನ್ನೇ ಮುಂದಿಡಲು ಸಿದ್ಧರಾಗಿದ್ದಾರೆ.

ಅಮೆರಿಕದಿಂದ ವಾಪಸ್ಸಾದ ಬಳಿಕ ಜುಲೈ 9 ಅಥವಾ 10ರಂದು ಅತೃಪ್ತರೊಂದಿಗೆ ಮಾತಾಡಲು ಸಿಎಂ ತೀರ್ಮಾನಿಸಿದ್ದಾರೆ. ಈ ವೇಳೆ ಸಿಎಂ ಮತ್ತವರ ಸಹೋದರನಿಂದ ತಮಗಾಗಿರುವ ತೊಂದರೆ, ಅವಮಾನಗಳ ಪಟ್ಟಿಯನ್ನೇ ಮುಂದಿಡಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಶಾಸಕರ ದೂರುಗಳೇನು..?
1. ಸಿಎಂ ಕಾಂಗ್ರೆಸ್ ಶಾಸಕರನ್ನು ಯಾವತ್ತೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ
2. ಕಾಂಗ್ರೆಸ್ ಶಾಸಕರನ್ನ ಎರಡನೇ ದರ್ಜೆ ಪ್ರಜೆಗಳಂತೆ ನಡೆಸಿಕೊಳ್ಳಲಾಗ್ತಿದೆ
3. ಸಿಎಂ ಭೇಟಿಗೆ ಹೋದಾಗ ಗಂಟೆಗಟ್ಟಲೆ ಸಿಗದೇ ಸತಾಯಿಸುತ್ತಾರೆ.
4. 37 ಶಾಸಕರಿರುವ ಜೆಡಿಎಸ್‍ಗೆ 79 ಶಾಸಕರಿರುವ ನಾವು ಬೆಂಬಲ ಕೊಟ್ಟರೂ ನಾವು ಲೆಕ್ಕಕಿಲ್ಲ
5. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ
6. ಯೋಜನೆಗಳನ್ನ ನೀಡುವ ವಿಷಯದಲ್ಲೂ ಕಾಂಗ್ರೆಸ್ ಶಾಸಕರಿಗೆ ಅನ್ಯಾಯ
8. ನಿಗಮ ಮಂಡಳಿ ಹಂಚಿಕೆ ಮಾಡಿದ್ದರೂ ಸಂಪೂರ್ಣ ಅಧಿಕಾರ ಅಧ್ಯಕ್ಷರಿಗಿಲ್ಲ
9. ಕಾಂಗ್ರೆಸ್ ಸಚಿವರ ಖಾತೆಯಲ್ಲಿ ಸಿಎಂ, ಸೂಪರ್ ಸಿಎಂ ರೇವಣ್ಣ ಹಸ್ತಕ್ಷೇಪ

ಇತ್ತ, ದೋಸ್ತಿ ಸರ್ಕಾರ ಸಂಕಷ್ಟದಲ್ಲಿರುವ ಸಮಯದಲ್ಲೇ ಆಹಾರ ಸಚಿವ ಜಮೀರ್ ಅಹ್ಮದ್ ಸೈಲೆಂಟ್ ಆಗಿರೋದು ಕೂಡ ತೀವ್ರ ಚರ್ಚೆಗೆ ಕಾರಣವಾಗಿದೆ. ಶಾಸಕ ಆನಂದ್ ಸಿಂಗ್‍ಗೆ ಜಮೀರ್ ತುಂಬಾ ಆಪ್ತರು. ಈಗಲ್‍ಟನ್ ರೆಸಾರ್ಟ್‍ನಲ್ಲಿ ಕಂಪ್ಲಿ ಗಣೇಶ್ ಹಲ್ಲೆ ನಡೆಸಿದ್ದ ಸಂದರ್ಭದಲ್ಲಿ ಆನಂದ್ ಸಿಂಗ್ ನಡುವೆ ಸಂಧಾನಕ್ಕೆ ಯತ್ನಿಸಿದ್ದರು. ಈಗ ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿದ್ದು, ಕಾಂಗ್ರೆಸ್ ನಾಯಕರ ಸಂಪರ್ಕಕ್ಕೂ ಸಿಗ್ತಿಲ್ಲ.

ಇದೀಗ ಈ ಸಮಯದಲ್ಲೇ ಜಮೀರ್ ಮೌನವಾಗಿರುವುದು ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮೂಲಗಳ ಪ್ರಕಾರ ಜಮೀರ್‍ಗೆ ಜಾರಿ ನಿರ್ದೇಶನಾಲಯದ(ಇಡಿ) ಭೀತಿ ಕಾಡುತ್ತಿದೆ ಎಂದು ಹೇಳಲಾಗುತ್ತಿದ್ದು, ಐಎಂಎ ಗೋಲ್ಡ್ ಕಂಪನಿ ವಂಚನೆ ಪ್ರಕರಣದಲ್ಲಿ ಶುಕ್ರವಾರ ಜಮೀರ್ ಇಡಿ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ. ಇಂತಹ ಸಮಯದಲ್ಲಿ ಆಪರೇಷನ್ ಕಮಲದ ಬಗ್ಗೆ ಮಾತಾಡಿ, ಶಾಸಕರ ಜೊತೆ ಸಂಧಾನಕ್ಕಿಳಿದು ಸುಮ್ಮನೆ ಸಂಕಷ್ಟಗಳನ್ನ ಮೈಮೇಲೆ ಎಳೆದುಕೊಳ್ಳುವುದು ಯಾಕೆ ಅನ್ನೋ ಜಮೀರ್ ಆಲೋಚನೆ ಮಾಡಿದ್ದಾರೆ ಎಂದು ಅವರ ಆಪ್ತ ವಲಯಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *