ಅಂಬುಲೆನ್ಸ್ ವಿಳಂಬವಾದ್ರೆ ದಂಡ ಪ್ರಯೋಗಕ್ಕೆ ಚಿಂತನೆ

Public TV
1 Min Read

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ತಡವಾಗಿ ಆಗಮಿಸುವ ಅಂಬುಲೆನ್ಸ್ ಗಳಿಗೆ ದಂಡ ವಿಧಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ರೋಗಿಗಳು ಅಥವಾ ಅವರ ಕಡೆಯವರು ಕರೆ ಮಾಡಿದ 20 ನಿಮಿಷಗಳಲ್ಲಿ ಅಂಬುಲೆನ್ಸ್ ಗಳು ರೋಗಿಗೆ ಸೇವೆ ನೀಡಬೇಕು. ಒಂದು ವೇಳೆ ಸೇವೆ ನೀಡುವಲ್ಲಿ ವಿಫಲರಾದರೆ ಅಂಬುಲೆನ್ಸ್ ಸೇವಾದಾರರು ಪ್ರತಿ ನಿಮಿಷಕ್ಕೆ 1 ಸಾವಿರ ರೂಪಾಯಿಯಂತೆ ದಂಡ ನೀಡಬೇಕಾಗುತ್ತದೆ. ನಗರ ಪ್ರದೇಶದಲ್ಲಿ 20 ನಿಮಿಷ, ಗ್ರಾಮಾಂತರ ಪ್ರದೇಶದಲ್ಲಿ 30 ನಿಮಿಷಗಳಲ್ಲಿ ಅಂಬುಲೆನ್ಸ್ ನಿಗದಿತ ಸ್ಥಳ ತಲುಪಿ ಸೇವೆ ಒದಗಿಸದೇ ಇದ್ದಲ್ಲಿ ಇಂತಹ ದಂಡ ವಿಧಿಸಲಾಗುತ್ತೆ ಅಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಉಪ ನಿರ್ದೇಶಕ ಡಾ. ಸ್ವತಂತ್ರ ಕುಮಾರ್ ತಿಳಿಸಿದ್ದಾರೆ.

108 ತುರ್ತು ಸೇವಾ ವ್ಯವಸ್ಥೆಯಲ್ಲಿ 711 ಅಂಬುಲೆನ್ಸ್ ಗಳನ್ನ ಆರೋಗ್ಯ ಇಲಾಖೆ ಹೊಂದಿದೆ. 300 ಅಂಬುಲೆನ್ಸ್ ಗಳನ್ನು ಬದಲಾಯಿಸಲು ಗುರುತಿಸಲಾಗಿದ್ದು, ಪ್ರತಿ 90 ಸಾವಿರ ರೋಗಿಗಳಿಗೆ ಇದೀಗ ಒಂದು ಅಂಬುಲೆನ್ಸ್ ಇದೆ.

ದಂಡ ಯಾರಿಗೆ, ಹೇಗೆ?
ಅಂಬುಲೆನ್ಸ್ ವಿಳಂಬವಾದರೆ ದಂಡ ಬೀಳೋದು ಕಂಪನಿಗೆ. ಅಂಬುಲೆನ್ಸ್ ಸಂಚಾರ ಸೇವೆಯನ್ನ ಯಾವ ಕಂಪನಿಗೆ ಗುತ್ತಿಗೆ ಕಟ್ಟಿರುತ್ತೋ ಅದೇ ಕಂಪನಿಯಿಂದ ದಂಡ ಕಟ್ಟಿಸಿಕೊಳ್ಳಲಾಗುತ್ತದೆ. ಈ ನಿಯಮ, ಈಗಿನ ಅಂಬುಲೆನ್ಸ್ ಸೇವೆ ನೀಡುವ ಜಿವಿಕೆ ಇಎಂಆರ್ ಐ ಕಂಪನಿಗೆ ಅನ್ವಯವಾಗಲ್ಲ. ಯಾಕಂದರೆ ರಾಜ್ಯ ಸರ್ಕಾರ ಜಿವಿಕೆ ಇಎಂಆರ್ ಐ ಜೊತೆ 10 ವರ್ಷಗಳಿಗೆ ಮಾತ್ರ ಸೇವೆ ನೀಡುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೀಗ ಈ ಅವಧಿ ಮುಗಿದಿದ್ದು, ಹೊಸದಾಗಿ ಈ ಟೆಂಡರನ್ನು ಯಾವ ಕಂಪನಿ ಪಡೆಯುತ್ತೋ ಆ ಕಂಪನಿ ಮೊದಲಿಗೆ ಮುಂಗಡ ಹಣವನ್ನ ಪಾವತಿ ಮಾಡಬೇಕು. ಅಂಬುಲೆನ್ಸ್ ತಡವಾಗಿ ಬಂದಾಗ ಇತರೆ ನಷ್ಟವಾದಾಗ ಮುಂಗಡವಾಗಿ ಪಾವತಿಸಿದ ಹಣದಲ್ಲಿ ದಂಡವನ್ನು ಕಟ್ಟಿಸಿಕೊಳ್ಳಲಾಗುತ್ತದೆ. ಸರ್ಕಾರದ ಈ ಹೊಸ ನಿಯಮಕ್ಕೆ ಅಂಬುಲೆನ್ಸ್ ಸೇವೆಯನ್ನ ನೀಡುವ ಕಂಪನಿಗಳು ಈ ನಿರ್ಧಾರವನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ತುಂಬಾ ಕಡಿಮೆಯಿವೆ.

Share This Article
Leave a Comment

Leave a Reply

Your email address will not be published. Required fields are marked *