ಮತ್ತೆ ಜಾಹೀರಾತು ಫಲಕ ಬೇಕಾ-ಬೇಡ್ವಾ ಗುದ್ದಾಟ ಆರಂಭ

Public TV
1 Min Read

ಬೆಂಗಳೂರು: ನಗರದ ಅಂದ ಕಾಪಾಡಬೇಕೆಂದು ಜಾಹೀರಾತು ಫಲಕ ಹಾಕದಂತೆ ಹೈಕೋರ್ಟ್ ಸೂಚನೆ ನೀಡಿದೆ. ಪರಿಣಾಮ ನಗರದ ಹಲವೆಡೆ ಜಾಹೀರಾತು ಹಾವಳಿ ಕ್ಷೀಣವಾಗಿದೆ. ಅಚ್ಚರಿಯೆಂದರೆ ಸದ್ಯ ಜಾಹೀರಾತು ಫಲಕ ಹಾಕಲು ಅವಕಾಶ ನೀಡಬಹುದೆಂದು ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇತ್ತ ಮೇಯರ್ ಗೌತಮ್ ಕುಮಾರ್ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಜಾಹೀರಾತು ಮತ್ತೆ ತಲೆ ಎತ್ತದಂತೆ ಉಲ್ಲೇಖಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿ ಹೋರ್ಡಿಂಗ್ಸ್ ಗೆ ಅವಕಾಶ ನೀಡುವ ಸಂಬಂಧ ಬಿಬಿಎಂಪಿಯ ಹಳೆಯ ನಿಯಮಕ್ಕೆ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಬಿಬಿಎಂಪಿ ಕಮಿಷನರ್ ಹೇಳಿದರು.

ಬಿಬಿಎಂಪಿ ಈಗ ಸೈನೇಜ್ ಮತ್ತು ನಾಮಫಲಕಕ್ಕೆ ಸಂಬಂಧಿಸಿದಂತೆ ಮಾತ್ರ ಜಾಹೀರಾತು ನಿಯಮ ರೂಪಿಸಿದೆ. ಹೀಗಾಗಿ ಜಾಹೀರಾತಿಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮ ರೂಪಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ ನಿಯಮ ರೂಪಿಸಿದ್ದು, ಇಷ್ಟರಲ್ಲೇ ಅಂತಿಮ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಆಯುಕ್ತರು ಹೇಳಿದರು.

ನಗರಾಭಿವೃದ್ಧಿ ಇಲಾಖೆ ನಿಯಮ ರೂಪಿಸುವ ನಿಟ್ಟಿನಲ್ಲಿ ಕೆಲವು ಸ್ಪಷ್ಟನೆ ಕೇಳಿದ್ದು, ಇದಕ್ಕೆ ಸಂಬಂಧಿಸಿದ ವಿವರಗಳನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆ ಮಾಡಲಾಗಿದೆ. ಆದರೆ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಯ ಬೈಲಾಕ್ಕೆ ವ್ಯತಿರಿಕ್ತವಾಗಿ ನಿಯಮ ರೂಪಿಸುತ್ತಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.

ನಗರಾಭಿವೃದ್ಧಿ ಇಲಾಖೆಯ ನಿಯವನ್ನು ನೋಡಿಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು. ಬಿಬಿಎಂಪಿಯ ಎಲ್ಲ ವಲಯಗಳಲ್ಲೂ ಒಂದೇ ರೀತಿಯ ಮಾನದಂಡ ಪಾಲಿಸಲು ಸಾಧ್ಯವಿಲ್ಲ. ನಗರದ ಹೊರವಲಯ ಹಾಗೂ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ಹೋರ್ಡಿಂಗ್ಸ್ ಗೆ ಅವಕಾಶ ನೀಡುವ ಬಗ್ಗೆ ಇನ್ನಷ್ಟೇ ಪರಿಶೀಲನೆ ಮಾಡಬೇಕಿದೆ ಎಂದು ಹೋರ್ಡಿಂಗ್ಸ್ ಅಳವಡಿಕೆಗೆ ಒಲವು ತೋರಿಸಿದರು.

ಬಿಬಿಎಂಪಿ ಬೈಲಾದಲ್ಲಿ ವಾಣಿಜ್ಯ ಮತ್ತು ನಾಮಫಲಕಗಳಲ್ಲಿ ಶೇ.60 ಕನ್ನಡ ಇರಬೇಕು ಎಂಬ ನಿಯಮವಿದೆ. ಆದರೆ, ಪರವಾನಿಗೆ ರದ್ದು ಮಾಡುವ ನಿಯಮವನ್ನು ಇನ್ನಷ್ಟೇ ಅಳವಡಿಸಿಕೊಳ್ಳಬೇಕಿದೆ ಎಂದು ಆಯುಕ್ತ ಅನಿಲ್ ಕುಮಾರ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *