ಮೂರು ಅಂತಸ್ತಿಗೆ ಅನುಮತಿ.. ಕಟ್ಟಿದ್ದು ಐದು ಅಂತಸ್ತು – ವಾಲಿದ ಬಿಲ್ಡಿಂಗ್‌ ತೆರವು ಕಾರ್ಯಾಚರಣೆ

Public TV
1 Min Read

– ಅಂದಾಜು 1 ಕೋಟಿ ವೆಚ್ಚದಲ್ಲಿ ನಿರ್ಮಾಣ; ಸ್ವಂತ ಖರ್ಚಿನಲ್ಲೇ ಬಿಲ್ಡಿಂಗ್‌ ಹೊಡೆಯುತ್ತಿರುವ ಮಾಲೀಕರು

ಬೆಂಗಳೂರು: ಕೋರಮಂಗಲದ ಜಕ್ಕಸಂಧ್ರದಲ್ಲಿ ನಕ್ಷೆ ಮಂಜುರಾತಿ ಉಲ್ಲಂಘಿಸಿ ಅಕ್ರಮವಾಗಿ ಕಟ್ಟಿದ್ದ ಐದು ಅಂತಸ್ತಿನ ಬಿಲ್ಡಿಂಗ್ ವಾಲಿದೆ. ಮೂರು ಅಂತಸ್ತಿಗೆ ಅನುಮತಿ ಪಡೆದು ಐದು ಅಂತಸ್ತು ಕಟ್ಟಿದ್ದ ಪರಿಣಾಮ ಪಿಲ್ಲರ್ ಹಾಗೂ ಗೋಡೆ ಬಿರುಕು ಬಿಟ್ಟು ಬೀಳುವ ಸ್ಥಿತಿಗೆ ಬಂದಿತ್ತು. ಕೂಡಲೇ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳ ಸೂಚನೆ ಮೇರೆಗೆ, ಒಂದು ಕೋಟಿ ವೆಚ್ಚದಲ್ಲಿ ಕಟ್ಟಿದ್ದ ಬಿಲ್ಡಿಂಗನ್ನು ಮನೆ ಮಾಲೀಕರೇ ಸ್ವಂತ ಖರ್ಚಿನಲ್ಲಿ ಹೊಡೆದಾಕುತ್ತಿದ್ದಾರೆ.

ಬಿಲ್ಡಿಂಗ್‌ನ ಮಾಲೀಕರು ಶಾಂತಮ್ಮ. ಒಂದು ವರ್ಷದ ಹಿಂದೆ ಈ ಬಿಲ್ಡಿಂಗ್ ನಿರ್ಮಾಣ ಕೆಲಸ ಆಗಿ, ಮುಂದಿನ ವಾರ ಗೃಹಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಆಗಿತ್ತು. ಈ ವೇಳೆ ಬಿಲ್ಡಿಂಗ್ ಬಿರುಕು ಬಿಟ್ಟು ಕುಸಿಯುವ ಹಂತಕ್ಕೆ ತಲುಪಿತ್ತು. ಕಳೆದ ಎರಡು ದಿನಗಳಿಂದ ಜೆಸಿಬಿ ಮೂಲಕ ಬಿಲ್ಡಿಂಗ್‌ಗೆ ಸಪೋರ್ಟ್ ಕೊಟ್ಟು, ಹಂತಹಂತವಾಗಿ ಕಟ್ಟಡವನ್ನ ತೆರವು ಮಾಡಲಾಗ್ತಿದೆ. ಇಡೀ ಬಿಲ್ಡಿಂಗ್‌ನ್ನೇ ನೆಲಸಮ ಮಾಡಲು ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: Kolar | ಕಿಡಿಗೇಡಿಗಳಿಂದ ಮನೆಗೆ ಬೆಂಕಿ – 4 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿ

15 ಅಡಿ ಅಗಲ, 50 ಅಡಿ ಉದ್ದದ ಜಾಗದಲ್ಲಿ ಅಕ್ರಮವಾಗಿ ಬಿಲ್ಡಿಂಗ್ ನಿರ್ಮಿಸಿದ್ದರು. ಈ ಕಟ್ಟಡವು ಅನಧಿಕೃತ ಕಟ್ಟಡವೆಂದು ಪರಿಗಣಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ 2020 ಕಲಂ 248(1) & 248(2) ರಂತೆ ಕಾರಣ ಕೇಳಿ ನೋಟಿಸ್‌ ನೀಡಲಾಗಿತ್ತು. ಎರಡು ಬಾರಿ ನೋಟಿಸ್‌ಗೂ ಉತ್ತರಿಸದೇ ಉದ್ಧಟತನ ಮೆರೆದಿದ್ದರು. ಇದೀಗಾ ಬಿಲ್ಡಿಂಗ್ ವಾಲುತ್ತಿದ್ದಂತೆ ಅಧಿಕಾರಿಗಳ ಗಮನಕ್ಕೆ ತಂದು ಬಿಲ್ಡಿಂಗ್ ತೆರವು ಮಾಡುತ್ತಿದ್ದಾರೆ. ಅಕ್ಕಪಕ್ಕದ ಮನೆಯವರನ್ನ ಬೇರೆಡೆಗೆ ಸ್ಥಳಾಂತರ ಮಾಡಿ, ಯಾವ ಮನೆಗಳಿಗೂ ಹಾನಿಯಾಗದಂತೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.

Share This Article