ಪಶ್ಚಿಮ ಬಂಗಾಳ | ಕೆಲಸದ ಒತ್ತಡದಿಂದ ಬಿಎಲ್‍ಒ ನೇಣಿಗೆ ಶರಣು – ಡೆತ್‌ನೋಟ್‍ನಲ್ಲಿ ಚುನಾವಣಾ ಆಯೋಗದ ವಿರುದ್ಧ ಆರೋಪ

2 Min Read

– SIR ನಿಲ್ಲಿಸುವಂತೆ ಮಮತಾ ಬ್ಯಾನರ್ಜಿ ಒತ್ತಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಬೂತ್‌ ಮಟ್ಟದ ಅಧಿಕಾರಿಯೊಬ್ಬರು (BLO) ಕೆಲಸದ ಒತ್ತಡದಿಂದ ನೇಣಿಗೆ ಶರಣಾಗಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ (Special Intensive Revision, SIR) ಅವರು ತೀವ್ರ ಒತ್ತಡಕ್ಕೊಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ನೇಣಿಗೆ ಶರಣಾದ ಮಹಿಳೆಯನ್ನು ಪಶ್ಚಿಮ ಬಂಗಾಳದ ನಾಡಿಯಾ ನಿವಾಸಿ ರಿಂಕು ತರಫ್ದಾರ್ (54) ಎಂದು ಗುರುತಿಸಲಾಗಿದೆ. ಕೃಷ್ಣನಗರದ ನಿವಾಸದ ರೂಮ್‌ನಲ್ಲಿ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಬಂಗಾಳಿ ಸ್ವಾಮಿ ವಿವೇಕಾನಂದ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ಮಹಿಸುತ್ತಿದ್ದರು. ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯೋವರೆಗೆ SIR ಪ್ರಕ್ರಿಯೆ ಮುಂದೂಡಲು ಸುಪ್ರೀಂಗೆ ಕೇರಳ ಸರ್ಕಾರ ಮನವಿ

ಅವರು ಆತ್ಮಹತ್ಯೆಗೆ ಶರಣಾದ ರೂಮ್‌ನಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಅದರಲ್ಲಿ ʻನನಗೆ ಬಿಎಲ್‌ಒ ಕೆಲಸ ನಿಭಾಯಿಸಲು ಸಾಧ್ಯವಾಗದಿದ್ದರೆ, ಆಡಳಿತಾತ್ಮಕ ಒತ್ತಡ ಬರುತ್ತದೆ. ಅದನ್ನು ನನಗೆ ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ತರಫ್ದಾರ್ ಅವರ ಸೋದರ ಮಾವ ಮಾಧ್ಯಮಗಳ ಜೊತೆ ಮಾತನಾಡಿ, ಅವರಿಗೆ ಬಿಎಲ್‌ಒ ಕೆಲಸ ವಹಿಸಿದಾಗಿಂದ ಮಾನಸಿಕ ಒತ್ತಡದಲ್ಲಿದ್ದರು. ಒತ್ತಡದ ಬಗ್ಗೆ ಯಾರೊಂದಿಗೂ ಹಂಚಿಕೊಂಡಿಲ್ಲ. ತಮ್ಮ ಕೆಲಸವನ್ನು ಬಿಡಲು ಬಯಸಿದ್ದರು ಎಂದು ಹೇಳಿಕೊಂಡಿದ್ದಾರೆ.

ಈ ಘಟನೆ ಬಳಿಕ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು (Mamata Banerjee) ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಬಂಗಾಳದಲ್ಲಿ ನಡೆಯುತ್ತಿರುವ SIR ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಸಿಇಸಿಗೆ ಅವರು ಪತ್ರ ಬರೆದಿದ್ದು, ಪತ್ರದಲ್ಲಿ ಯೋಜಿತವಲ್ಲದ, ಒತ್ತಾಯಪೂರ್ವಕ ಕೆಲಸ ಜೀವಗಳಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ಮತದಾರರ ಪಟ್ಟಿ ಪರಿಷ್ಕರಣೆ ಕೈ ಬಿಡುವಂತೆ ಸಲಹೆ ನೀಡಿದ್ದಾರೆ.

SIR ಪ್ರಾರಂಭವಾದಾಗಿನಿಂದ 28 ಜನರು ಈಗಾಗಲೇ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೆಲವರು ಭಯ, ಒತ್ತಡ ಮತ್ತು ಅಧಿಕ ಕೆಲಸದಿಂದಾಗಿ ಸಾವಿಗೀಡಾಗಿದ್ದಾರೆ. ಬಂಗಾಲಿ ಸ್ವಾಮಿ ವಿವೇಕಾನಂದ ಶಾಲೆಯ ಶಿಕ್ಷಕಿ 54 ವರ್ಷದ ರಿಂಕು ತರಫ್ದಾರ್ ಅವರ ಶವ ಕೃಷ್ಣನಗರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: SIR ಪ್ರಶ್ನಿಸಿ ಡಿಎಂಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

Share This Article