ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಕಲ್ಲು ತೂರಾಟ

Public TV
2 Min Read

ಕೋಲ್ಕತ್ತಾ: ಇಂದು (ಮೆ 25) ನಡೆದ ಆರನೇ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದ (West Bengal) ಜಾರ್‌ಗ್ರಾಮ್‌ನ ಬಿಜೆಪಿ ಅಭ್ಯರ್ಥಿ (BJP Candidate) ಪ್ರಣತ್ ತುಡು ಅವರ ಮೇಲೆ ಪಶ್ಚಿಮ ಮಿಡ್ನಾಪುರದ ಮಂಗಲಪೋಟಾದಲ್ಲಿ ಜನ ಕಲ್ಲು ತೂರಾಟ ನಡೆಸಿದ್ದಾರೆ.

ಪ್ರಣತ್ ತುಡು ಅವರನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ಶೀಲ್ಡ್‍ಗಳನ್ನು ಹಿಡಿದುಕೊಂಡು ಕರೆದೊಯ್ದಿದ್ದಾರೆ. ಪ್ರತಿಭಟನಾಕಾರರು ಅಭ್ಯರ್ಥಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದ್ದು, ಮಾಧ್ಯಮ ಪ್ರತಿನಿಧಿಗಳು, ಭದ್ರತಾ ಸಿಬ್ಬಂದಿ ಹಾಗೂ ಬಿಜೆಪಿ ಅಭ್ಯರ್ಥಿ ಸ್ಥಳದಿಂದ ಪರಾರಿಯಾಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಗ್ಯಾಂಗ್‌ ವಾರ್‌ – ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಕಿಡಿ

ಮತಗಟ್ಟೆಯ ಹೊರಗೆ ಮತ ಚಲಾಯಿಸಲು ಕಾಯುತ್ತಿದ್ದ ಮಹಿಳೆಗೆ ಪ್ರಣತ್ ತುಡು ಅವರ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಇದು ಪ್ರತಿಭಟನೆಗೆ ಕಾರಣವಾಯಿತು ಎಂದು ತೃಣಮೂಲ ಕಾಂಗ್ರೆಸ್(Trinamool Congress) ಆರೋಪಿಸಿದೆ.

ಘಟನೆಗೆ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಗೂಂಡಾಗಳು ಕಾರಣ ಎಂದು ಪ್ರಣತ್ ತುಡು ದೂರಿದ್ದಾರೆ. ಅಲ್ಲದೇ ಕಲ್ಲು ತೂರಾಟದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯ ತಲೆಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಣತ್ ತುಡು ಹೇಳಿಕೊಂಡಿದ್ದಾರೆ. ಇದೇ ವಿಚಾರವಾಗಿ, ಬಿಜೆಪಿ ಮುಖಂಡ ಅಮಿತ್ ಮಾಳವಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಘಟನೆಗೆ ಟಿಎಂಸಿಯನ್ನು ದೂಷಿಸಿದ್ದಾರೆ ಮತ್ತು ಜನರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷವನ್ನು ಓಡಿಸಲು ಮತ ಹಾಕುತ್ತಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರಣತ್ ತುಡು ಅವರು, ಪಕ್ಷದ ಏಜೆಂಟರನ್ನು ಮತಗಟ್ಟೆ ಒಳಗೆ ಬಿಡುತ್ತಿಲ್ಲ ಎಂಬ ಮಾಹಿತಿ ಮೇರೆಗೆ ಕೆಲವು ಮತಗಟ್ಟೆಗಳಿಗೆ ಭೇಟಿ ನಿಡುತ್ತಿದ್ದೆ. ಈ ವೇಳೆ ರಸ್ತೆಗಳನ್ನು ತಡೆದ ಟಿಎಂಸಿ ಗೂಂಡಾಗಳು ನನ್ನ ಕಾರಿಗೆ ಇಟ್ಟಿಗೆಗಳನ್ನು ಎಸೆಯಲು ಪ್ರಾರಂಭಿಸಿದರು. ನನ್ನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರು ಗಾಯಗೊಂಡರು. ನನ್ನ ಜೊತೆಗಿದ್ದ ಇಬ್ಬರು ಭದ್ರತಾ ಸಿಬ್ಬಂದಿ ತಲೆಗೆ ಗಾಯಗೊಂಡು ಆಸ್ಪತ್ರೆಗೆ ಸೇರಿಸಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಭೀಕರ ಅಪಘಾತ – ಕಲಬುರಗಿಯ ಮೂವರು ದುರ್ಮರಣ

Share This Article