ಮಾಜಿ ಗೆಳೆಯನ ಲೈಂಗಿಕ ಪ್ರಕರಣ ಕೆದಕಿ ಟಾಂಗ್ ಕೊಟ್ಟ ಬೇಳೂರು ಗೋಪಾಲಕೃಷ್ಣ

Public TV
2 Min Read

ಶಿವಮೊಗ್ಗ: ಕ್ಷೇತ್ರದಲ್ಲಿ ಉಪಚುನಾವಣೆ ರಂಗೇರುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತನಾಗಿದ್ದ ಶಾಸಕ ಹರತಾಳು ಹಾಲಪ್ಪ ಅವರ ಲೈಂಗಿಕ ಪ್ರಕರಣವನ್ನು ಕೆದಕಿ ಬೇಳೂರು ಗೋಪಾಲಕೃಷ್ಣ ಟಾಂಗ್ ಕೊಟ್ಟಿದ್ದಾರೆ.

ಲೈಂಗಿಕ ಹಗರಣದಲ್ಲಿ ಸಾಕ್ಷಿ ಮುಚ್ಚಿ ಹರತಾಳು ಹಾಲಪ್ಪ ಅವರು ಜಯ ಸಾಧಿಸಿರಬಹುದು. ಆದರೆ ಆಕೆಯೊಂದಿಗೆ ಅವರು ಸಂಬಂಧ ಹೊಂದಿರಲಿಲ್ಲವೇ? ಒಂದು ವೇಳೆ ಸಂಬಂಧ ಇಲ್ಲ ಅಂತಾ ಹೇಳುವುದಾದರೆ ಸಿಗಂದೂರಿಗೆ ಬಂದು ಪ್ರಮಾಣ ಮಾಡಲಿ. ನಾನು, ಮಧು ಬಂಗಾರಪ್ಪ ಅವರನ್ನು ಕರೆದುಕೊಂಡು ಬಂದು, ಶರಾವತಿ ಡೆಂಟಲ್ ಕಾಲೇಜು ವಿಷಯ ಬಗ್ಗೆ ಪ್ರಮಾಣ ಮಾಡಿಸುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಕುಮಾರ್ ಬಂಗಾರಪ್ಪ ಅವರು ಡೆಂಟಲ್ ಕಾಲೇಜು ಅಧ್ಯಕ್ಷರಾಗಿದ್ದರು. ಆಗ ಅಧ್ಯಕ್ಷ ಸ್ಥಾನ ಈಡಿಗರಿಗೆ ಸೇರಬೇಕು ಎಂಬುದು ಮರೆತುಹೋಗಿತ್ತಾ? ಅಥವಾ ನಿಮ್ಮ ಬಾಯಲ್ಲಿ ಕಡುಬು ಹಾಕಿಕೊಂಡಿದ್ದರಾ ಎಂದು ಪ್ರಶ್ನಿಸಿ ಕಿರಿಕಾರಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಮನಸ್ಥಿತಿ ಕಳೆದುಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರದ ಕುರಿತಾಗಿ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಕುಟುಕಿದರು.

ಬಿ.ವೈ.ರಾಘವೇಂದ್ರ ಹಾಗೂ ಬಿ.ವೈ.ವಿಜಯೇಂದ್ರ ಅವರು ನಕಲಿ ಸಹಿ ಮಾಡಿ, ತಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದರು. ಆದರೆ ಈ ವಿಚಾರವನ್ನು ಹೇಳಿಕೊಳ್ಳದೇ ಮಕ್ಕಳನ್ನು ಶಿಕ್ಷೆಯಿಂದ ತಪ್ಪಿಸಿ ತಾವೇ ಜೈಲಿಗೆ ಹೋದರು ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಬಿಜೆಪಿ ನಾಯಕರ ಬಗ್ಗೆ ತಿಳಿದುಕೊಂಡಿದ್ದಾರೆ. ಯಾರನ್ನು ಹತ್ತಿಕ್ಕಬೇಕು, ಮುಗಿಸಬೇಕು ಅಂತಾ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಬಿಸಿ ಈಗ ಬಿ.ಎಸ್.ಯಡಿಯೂಪ್ಪನವರಿಗೂ ತಟ್ಟಿದ್ದು, ಒದ್ದಾಡುವಂತಾಗಿದೆ. ಪ್ರಧಾನಿ ಮೋದಿ ಹೀಗೆ ಮಾಡದಿದ್ದರೇ ಸಂಸದೆ ಶೋಭಾ ಕರಂದ್ಲಾಜೆ ಮೇಡಂ ಎಂದೋ ಹೊಸ ಪಕ್ಷ ಕಟ್ಟಲು ಸಿದ್ಧರಾಗಿದ್ದರು ಎಂದು ಲೇವಡಿ ಮಾಡಿದರು.

ಬಿಜೆಪಿಯವರಿಗೆ ಹಾಗೂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆ ಇಲ್ಲ. ಸುಳ್ಳು-ಡೊಂಗಿ ಅವರ ಬಾಯಲ್ಲಿ ಬರುತ್ತವೆ. ಸಿಗಂದೂರು ದೇವಾಲಯ ಸಮೀಪದಲ್ಲಿ ತುಮರಿ ಸೇತುವೆ ನಿರ್ಮಿಸುತ್ತೇವೆ ಅಂತಾ 2008ರಲ್ಲಿ ಭರವಸೆ ನೀಡಿದ್ದರು. ಆದರೆ ಹತ್ತು ವರ್ಷ ಕಳೆದರೂ ಇನ್ನೂ ಸೇತುವೆ ನಿರ್ಮಾಣವಾಗಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಿಬಿಐ, ಈಡಿ, ಐಟಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‍ನ ದೊಡ್ಡ ದೊಡ್ಡ ನಾಯಕರನ್ನು ಬಗ್ಗು ಬಡಿಯಲು ಪಿತೂರಿ ನಡೆಸಿದ್ದಾರೆ. ಕುತಂತ್ರದ ಮೂಲಕ ಎಲ್ಲರನ್ನು ಹೆದರಿಸಿ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಆಟ ಆಡುತ್ತಿದ್ದಾರೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *