ಹಿಂದೂ ಯುವಕನ ಮೇಲೆ ಹಲ್ಲೆ ಕೇಸ್‌ – ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ್ದ ಪಿಎಸ್‌ಐ ಅಮಾನತು

Public TV
1 Min Read

ಮಂಡ್ಯ: ಜಿಲ್ಲೆಯ ನಾಗಮಂಗಲದ ಬೆಳ್ಳೂರು (Belluru) ಪಟ್ಟಣದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣದಲ್ಲಿ ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ್ದ ಪಿಎಸ್‌ಐ‌ನ್ನು ಅಮಾನತು ಮಾಡಲಾಗಿದೆ.

ಬೆಳ್ಳೂರು ಠಾಣೆಯ ಬಸವರಾಜ ಚಿಂಚೋಳಿ ಅಮಾನತುಗೊಂಡ ಪಿಎಸ್‌ಐ ಆಗಿದ್ದಾರೆ. ಕರ್ತವ್ಯಲೋಪ ಕಾರಣ ನೀಡಿ ಮಂಡ್ಯ ಎಸ್‌ಪಿ ಎನ್.ಯತೀಶ್ ‌ಅಮಾನತು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣ- 11ಕ್ಕೂ ಹೆಚ್ಚು ಮಂದಿ ಮೇಲೆ ಎಫ್‌ಐಆರ್

ಬೆಳ್ಳೂರಿನಲ್ಲಿ ಕಾರು ಓವರ್ ಟೇಕ್ ವಿಚಾರವಾಗಿ ಹಿಂದೂ ಹಾಗೂ ಮುಸ್ಲಿಂ ಯುವಕರ ಮಧ್ಯೆ ಗಲಾಟೆಯಾಗಿದ್ದು, ಬಳಿಕ ಅಭಿಲಾಷ್ ಎಂಬವನ ಮೇಲೆ ಹಲ್ಲೆ ನಡೆದಿತ್ತು. ಈ ಬಗ್ಗೆ ದೂರು ಸ್ವೀಕರಿಸದೆ ಪಿಎಸ್‌ಐ ಬಸವರಾಜ ಚಿಂಚೋಳಿ ನಿರ್ಲಕ್ಷ್ಯ ತೋರಿದ್ದರು ಎಂದು ಆರೋಪ ಮಾಡಲಾಗಿತ್ತು. ಬಳಿಕ ಸೋಮವಾರ ರಾತ್ರಿ 7 ಗಂಟೆ ಸಮಯದಲ್ಲಿ ಮುಸ್ಲಿಂ ಯುವಕರ ಗುಂಪಿನಿಂದ ಮತ್ತೆ ದಾಂಧಲೆಯಾಗಿದೆ. ಈ ವೇಳೆ ಅಭಿಲಾಷ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೆಲ ಮನೆಗಳಿಗೆ ನುಗ್ಗಿ ಬೆದರಿಕೆ ಹಾಕಲಾಗಿದೆ ಎಂದು ಸ್ಥಳೀಯರು ಆರೋಪಿದ್ದಾರೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬೆಳ್ಳೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ಕಡೆಗೆ ಪ್ರಕರಣದ ಗಂಭೀರತೆ ಅರಿತು ಪೊಲೀಸರು ಈ ಸಂಬಂಧ ದೂರು ಸ್ವೀಕಾರ ಮಾಡಿದರು. ಘಟನೆ ಸಂಬಂಧ 3 ಪ್ರತ್ಯೇಕ ದೂರು ದಾಖಲಾಗಿದ್ದು, ಈ ಹಿಂದೆ ದೂರು ಸ್ವೀಕರಿಸದ ಪಿಎಸ್‌ಐ ವಿರುದ್ಧವೂ ದೂರು ನೀಡಲಾಗಿತ್ತು. ಇದೀಗ ದೂರು ಬೆನ್ನಲ್ಲೇ ಪಿಎಸ್‌ಐ ಬಸವರಾಜ ಚಿಂಚೋಳಿ ಅವರನ್ನು ಎಸ್‌ಪಿ ಯತೀಶ್ ಅಮಾನತು ಮಾಡಿದ್ದಾರೆ. ಇದನ್ನೂ ಓದಿ: ಬೆಳ್ಳೂರಿನಲ್ಲಿ ಹಿಂದೂಗಳ ಮನೆಗೆ ನುಗ್ಗಿ ಅನ್ಯಕೋಮಿನ ಯುವಕರ ದಾಂಧಲೆ

Share This Article