ಬಳ್ಳಾರಿ: ಪತ್ನಿಯ ಶೀಲ ಶಂಕಿಸಿ 5 ಜನರನ್ನು ಮಚ್ವಿನಿಂದ ಕೊಚ್ಚಿ ಕೊಲೆ ಮಾಡಿದ್ದ ಅಪರಾಧಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಚಪ್ಪರಹಳಿಯ ನಿವಾಸಿ ಬೈಲೂರು ತಿಪ್ಪಯ್ಯಾ (40) 2017ರ ಫೆಬ್ರವರಿ 25 ರಂದು ಶೀಲ ಶಂಕಿಸಿ ಪತ್ನಿ ಪಕ್ಕೀರಮ್ಮಾ, ಆಕೆಯ ತಂಗಿ ಗಂಗಮ್ಮಾ ಹಾಗೂ ತನ್ನ ಮೂವರು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿದ್ದನು.
ಹತ್ತು ವರ್ಷಗಳಿಂದ ಪತ್ನಿಯ ಜೊತೆಗೆ ಸಂಸಾರ ಮಾಡಿದ್ದ ಈತನಿಗೆ ಮೂವರು ಮಕ್ಕಳೂ ಇದ್ದಾರೆ. ಆದರೆ ಹೆಂಡತಿ ಪರ ಪುರುಷನ ಜೊತೆ ಸಂಪರ್ಕ ಇದೆ ಎಂದು ಅನುಮಾನಿಸಿ ರಾತ್ರಿ ಕುಡಿದ ಮತ್ತಿನಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದನು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಂಪ್ಲಿ ಪೊಲೀಸರು ಆರೋಪಿ ಬೈಲೂರ ತಿಪ್ಪಯ್ಯನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಹೊಸಪೇಟೆಯ ಮೂರನೇ ಅಪರ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಎಮ್ ರಾಜಶೇಖರ್ ಸುದೀರ್ಘ ವಿಚಾರಣೆ ನಡೆಸಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಂದು ಆರೋಪಿಗೆ ಮರಣದಂಡನೆ ಆದೇಶ ಮಾಡಿದ್ದಾರೆ.
ಸರ್ಕಾರಿ ಅಭಿಯೋಜಕರಾದ ಎಮ್ ಬಿ ಸುಂಕಣ್ಣಾ ಅವರು ವಾದ ಮಂಡಿಸಿ ಆರೋಪಿಗೆ ಮರಣದಂಡನೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.