ಟಿಪ್ಪು ಜಯಂತಿ ವಿರೋಧಿಸಿ, ಮತ್ತೊಂದೆಡೆ ಬೆಂಬಲಿಸುವ ಬಿಜೆಪಿಯ ದ್ವಿಮುಖ ಧೋರಣೆ ಅನಾವರಣ

Public TV
1 Min Read

ಬಳ್ಳಾರಿ/ಬೆಂಗಳೂರು: ರಾಜ್ಯದೆಲ್ಲೆಡೆ ಟಿಪ್ಪು ಜಯಂತಿಯನ್ನು ಬಿಜೆಪಿ ವಿರೋಧಿಸುತ್ತಿದೆ. ಟಿಪ್ಪು ಜಯಂತಿ ಬೇಡವೇ ಬೇಡವೆಂದು ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಬಳ್ಳಾರಿ ಬಿಜೆಪಿ ಕಚೇರಿಯಲ್ಲೆ ಟಿಪ್ಪುಜಯಂತಿ ಆಚರಿಸಲಾಗಿದ್ದರೆ, ಟಿಪ್ಪು ಜಯಂತಿಗೆ ಶುಭಕೋರುವ ಫ್ಲೆಕ್ಸ್ ನಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಫೋಟೋ ಪ್ರಕಟವಾಗಿದೆ.

ಬಳ್ಳಾರಿಯ ಸಂಸದ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರ ಪರಮಾಪ್ತನಾಗಿರುವ ಪಾಲಿಕೆಯ ಸದಸ್ಯ ಗೋವಿಂದರಾಜಲು ನೇತೃತ್ವದಲ್ಲಿ ಬಿಜೆಪಿ ಕಚೇರಿಯ ಮುಂಭಾಗ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಹೊಸಪೇಟೆಯಲ್ಲಿ ಸರ್ಕಾರದಿಂದ ಆಚರಿಸುತ್ತಿರುವ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಆನಂದ ಸಿಂಗ್ ಅನಾರೋಗ್ಯದ ಮಧ್ಯೆಯೂ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ.

ಬಿಜೆಪಿಯ ಕಾರ್ಯಕರ್ತರು ಬಿಜೆಪಿ ಕಚೇರಿಯ ಮುಂದೆ ಟಿಪ್ಪು ಭಾವಚಿತ್ರವನ್ನಿಟ್ಟು ಹಾರ ಹಾಕಿ ಪೂಜೆ ಸಲ್ಲಿಸಿ ಜಯಂತಿ ಆಚರಣೆ ಮಾಡಿದ್ದಾರೆ. ಇದು ಟಿಪ್ಪು ಜಯಂತಿ ವಿರೋಧಿಸುತ್ತಿರುವ ಬಿಜೆಪಿ ಮುಖಂಡರಿಗೆ ಮುಜುಗರ ಉಂಟುಮಾಡಿದೆ.

ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಕಾರ್ಯಕರ್ತರು ಕಳೆದ ರಾತ್ರಿಯೇ ಸಂಸದ ಶ್ರೀರಾಮುಲು ಅನುಮತಿ ಸಹ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ನಾಯಕರು ಬಳ್ಳಾರಿಯಲ್ಲಿ ಮುಸ್ಲಿಂ ಮತಗಳನ್ನು ಪಡೆಯಲು ಇಬ್ಬಗೆಯ ನೀತಿ ಅನುಸರಿಸುತ್ತಿರುವುದು ಬಿಜೆಪಿಯ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಪ್ರತಿಕ್ರಿಯಿಸಿದ ಆನಂದ್ ಸಿಂಗ್, ಎಲ್ಲ ಜಯಂತಿಯಲ್ಲಿ ನಾನು ಪಾಲ್ಗೊಳ್ಳುತ್ತೇನೆ. ಎಲ್ಲ ಜಯಂತಿಯಂತೆ ಟಿಪ್ಪು ಜಯಂತಿ ಕೂಡ ಒಂದು. ವಿಜಯನಗರ ಕ್ಷೇತ್ರದಲ್ಲಿ ಭೇದಭಾವವಿಲ್ಲ. ಕ್ಷೇತ್ರದ ಜನರ ಇಚ್ಛೆಯಂತೆ ಪಾಲ್ಗೊಂಡಿದ್ದೇನೆ. ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳಬಾರದು ಎಂದು ಯಾರು ಹೇಳಿಲ್ಲ. ಕೃಷ್ಣದೇವರಾಯರ ಆಳ್ವಿಕೆಯಲ್ಲಿ ಎಲ್ಲರನ್ನು ಒಂದೇ ರೀತಿ ನೋಡಲಾಗುತ್ತಿತ್ತು. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಹೇಳಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಶಾಸಕ ಸತೀಶ್ ರೆಡ್ಡಿ ಪ್ಲಾನ್ ಮಾಡಿದ್ದು, ಟಿಪ್ಪು ಜಯಂತಿ ಪರ ಇರುವ ಫ್ಲೆಕ್ಸ್ ನಲ್ಲಿ  ಫೋಟೋ ಪ್ರಕಟವಾಗಿದೆ. ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯ ರಸ್ತೆಯಲ್ಲಿನ ಫ್ಲೆಕ್ಸ್ ನಲ್ಲಿ ಸತೀಶ್ ರೆಡ್ಡಿ ಅವರ ಫೋಟೋಗಳು ಪ್ರಕಟವಾಗಿದೆ.

 

 

 

Share This Article
Leave a Comment

Leave a Reply

Your email address will not be published. Required fields are marked *