ಬಳ್ಳಾರಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ (Belekeri Iron Ore Case) ಸಂಬಂಧಿಸಿದಂತೆ ಬಳ್ಳಾರಿಯಲ್ಲಿ (Ballari) ಇಂದು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಾಜಿ ಸಚಿವ ನಾಗೇಂದ್ರ (Nagendra) ಅವರ ಆಪ್ತ ಕುರುಬರ ನಾಗರಾಜಗೆ ಸೇರಿದ ತಾಳೂರು ರಸ್ತೆಯ ಮನೆಯ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರಿನಿಂದ ಬಂದಿರುವ 5 ಜನ ಅಧಿಕಾರಿಗಳಿಂದ ದಾಳಿ ಮುಂದುವರೆದಿದೆ. ಸದ್ಯ ನಾಗರಾಜ ಬೆಂಗಳೂರಿನಲ್ಲಿದ್ದು, ಮನೆಯಲ್ಲಿ ನಾಗರಾಜ ಅವರ ತಾಯಿ, ತಂಗಿ ಹಾಗೂ ತಂಗಿಯ ಪತಿ ಇದ್ದಾರೆ. ಇದನ್ನೂ ಓದಿ: ಬೇಲೆಕೇರಿ ಬಂದರಿನಲ್ಲಿ ಅಕ್ರಮ ಕಬ್ಬಿಣದ ಅದಿರು ರಫ್ತು ಕೇಸ್; ಹರಿಯಾಣ, ಕರ್ನಾಟಕದಲ್ಲಿ ಇಡಿ ದಾಳಿ
ಹೊಸಪೇಟೆಯ ಹೊಟೇಲ್ ಉದ್ಯಮಿ ಶ್ರೀನಿವಾಸ್ ರಾವ್ (ಸೀನಾಬಾಬು) ಅವರ ಪ್ರಿಯದರ್ಶನಿ ಹೋಟೆಲ್ ಮೇಲೂ ದಾಳಿಯಾಗಿದೆ. ವಿನಾಯಕ ನಗರ ಮನೆ ಮತ್ತು ಬಸವೇಶ್ವರ ಬಡಾವಣೆಯ ಮನೆಯ ಮೇಲೆ ದಾಳಿ ಮಾಡಿರುವ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಶ್ರೀನಿವಾಸ ಅವರು ದಾಳಿ ಗಣಿ ಗುತ್ತಿಗೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಇಡಿ ಬೇಲಿಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಮರು ಜೀವ ನೀಡಿದ್ದರಿಂದ 17 ಜನ ಆರೋಪಿಗಳಿಗೆ ನಡುಕ ಹುಟ್ಟಿಸಿದೆ.
ಇತ್ತೀಚೆಗಷ್ಟೇ ಶಾಸಕ ಸತೀಶ್ ಸೈಲ್ ಈ ಪ್ರಕರಣದಲ್ಲಿ ದೋಷಿ ಎಂದು ಜಪ್ರತಿನಿಧಿಗಳ ಕೋರ್ಟ್ ತೀರ್ಪು ನೀಡಿತ್ತು. ಈ ಬೇಲಿಕೇರಿ ಪ್ರಕರಣದಲ್ಲಿ ಜನಾರ್ದನ ರೆಡ್ಡಿ, ಬಿ ನಾಗೇಂದ್ರ, ಆನಂದ್ ಸಿಂಗ್ ಸೇರಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಹಲವರಿದ್ದಾರೆ.