ಅಂಧನಾದ್ರೂ ಕಾಯಕ ಮರೆತಿಲ್ಲ-ಪತಿಯ ಕೆಲಸಕ್ಕೆ ಸಾಥ್ ನೀಡ್ತಿರೋ ಪತ್ನಿಗೆ ಬೇಕಿದೆ ಹೊಲಿಗೆ ಯಂತ್ರ

Public TV
1 Min Read

ಧಾರವಾಡ: ಅಂಧನಾದರೂ ಮನೆಯಲ್ಲಿ ಪತ್ನಿ ಹಾಗೂ ಮಗುವಿಗೆ ಸಾಕಲು ಸಾಕಷ್ಟು ಪರದಾಟ ನಡೆಸಿದವರು. ಕಣ್ಣಿದ್ರೆ ಏನಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದಿತ್ತು ಎಂದು ಚಿಂತೆ ಕಾಡುತ್ತಿದೆ. ಸದ್ಯ ಆ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ಆ ವ್ಯಕ್ತಿ ಪಬ್ಲಿಕ್ ಟಿವಿ ಮೊರೆ ಬಂದಿದ್ದಾರೆ.

35 ವರ್ಷದ ಶಿವಪ್ಪ ಆನಿ 11ನೇ ವಯಸ್ಸಿನಲ್ಲಿ ಎಮ್ಮೆ ಮೇಯಿಸಲು ಹೋಗಿ ಬಿರು ಬಿಸಿಲಿನ ಹೊಡೆತಕ್ಕೆ ಕಣ್ಣು ಕಳೆದುಕೊಂಡ ದುರ್ದೈವಿ. ಶಿವಪ್ಪ ಮೂಲತಃ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಹರವಿ ಗರುಡಹೊನ್ನಳ್ಳಿ ಗ್ರಾಮದ ನಿವಾಸಿ. ಸದ್ಯ ಮಾಡುವ ಕೆಲಸವನ್ನು ಕಳೆದುಕೊಂಡ ಶಿವಪ್ಪ ದಿಕ್ಕು ತೋಚದಂತಾಗಿದೆ. ಆದ್ರೆ ಪತ್ನಿ ಟೈಲರಿಂಗ್ ಕೆಲಸ ಮಾಡುತ್ತಾ ಕುಟುಂಬಕ್ಕೆ ಆಧಾರವಾಗಿದ್ದಾರೆ.

ಮನೆಯವರು ಪುಟ್ಟರಾಜು ಗವಾಯಿಗಳ ಸಂಗೀತ ಶಾಲೆಗೆ ಕಳುಹಿಸಿದ್ದರು. ಆದರೆ ಸಂಗೀತದ ವಿದ್ಯೆ ಇವರಿಗೆ ತಲೆಗೆ ಹತ್ತಲಿಲ್ಲ. ಧೃತಿಗೆಡದ ಶಿವಪ್ಪ ಆನಿ ಕುರ್ಚಿಗೆ ವಾಯರ್ ಹೆಣೆಯುವ ಕೆಲಸ ಕಲಿತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕರ ಸೀಟ್ ಹೆಣೆಯುತ್ತ ಜೀವನ ಸಾಗಿಸುತ್ತಿದ್ದರು. 5 ವರ್ಷದ ಹಿಂದೆ ಮನೆಯವರು ಸೇರಿ ವಿವಾಹವನ್ನು ಮಾಡಿದ್ರು ಜೀವನವೂ ಸುಖಕರವಾಗಿತ್ತು.

ಸಾರಿಗೆ ಸಂಸ್ಥೆಯ ಚಾಲಕರಿಗೆ ವಾಯರ್ ರಹಿತ ಸೀಟು ತಯಾರಾಗಿದ್ದು, ವಾಯರ್ ಹೆಣೆಯುವ ಕಾಯಕಕ್ಕೆ ಕತ್ತರಿ ಬಿದ್ದಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಶಿವಪ್ಪರ ಪತ್ನಿ ಗಂಗವ್ವ ಬಟ್ಟೆ ಹೊಲಿಗೆ ಕೆಲಸ ಕಲಿತ್ತಿದ್ದು ಅನ್ಯರಿಂದ ಹೊಲಿಗೆ ಯಂತ್ರವನ್ನು ಪಡೆದು ಅಷ್ಟಿಷ್ಟು ಮನೆಗೆ ಬರುವ ಬಟ್ಟೆಗಳನ್ನ ಹೊಲೆದು ಜೀವನ ನಡೆಸುತ್ತಿದ್ದಾರೆ.

ಪತ್ನಿಯ ಪರಿಶ್ರಮವನ್ನು ಕಂಡು ಶಿವಪ್ಪ ಪತ್ನಿಯ ಕೆಲಸಕ್ಕೆ, ಮಗುವಿನ ವಿದ್ಯಾಭ್ಯಾಸ ಹಾಗೂ ಕುಟುಂಬಕ್ಕೆ ಆಧಾರಸ್ತಂಭವಾಗಿ ನಿಲ್ಲಬೇಕೆಂದು ಸ್ವಾಭಿಮಾನದಿಂದ ಬದುಕುವ ಛಲ ತೊಟ್ಟಿದ್ದಾರೆ. ಸ್ವಂತ ಹೊಲಿಗೆ ಯಂತ್ರ ಇದ್ರೆ ಬಟ್ಟೆ ಹೊಲೆದು ಜೀವನ ನಡೆಸಲು ಅನುಕೂಲವಾಗುತ್ತೆ. ಯಾರಾದ್ರೂ ದಾನಿಗಳು ಟೈಲರಿಂಗ್ ಮಿಷಿನ್ ದಾನ ಮಾಡಿದ್ರೆ ನೆಮ್ಮದಿ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗುತ್ತೆ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಕೇಳಿಕೊಳ್ಳುತ್ತಿದ್ದಾರೆ.

https://www.youtube.com/watch?v=H3jwMMgjcMY

Share This Article
Leave a Comment

Leave a Reply

Your email address will not be published. Required fields are marked *