ಕುಟುಂಬದ ಜವಾಬ್ದಾರಿ ಹೊರಲು ಪಣತೊಟ್ಟಿರುವ ವಿಕಲಚೇತನಿಗೆ ಬೇಕಿದೆ ಟ್ರೈಸಿಕಲ್!

Public TV
1 Min Read

ರಾಮನಗರ: ಕುಟುಂಬಕ್ಕೆ ವಂಶಪಾರಂಪರ್ಯವಾಗಿ ಬರುತ್ತಿರುವ ವಿಕಲತೆಯಿಂದ ಕುಟುಂಬದ ಎಲ್ಲರ ಕೈ ಕಾಲುಗಳ ಬೆರಳುಗಳೆಲ್ಲಾ ಕೂಡಿಕೊಂಡಿದೆ. ಕುಟುಂಬದ ಆಧಾರವಾಗಬೇಕಿದ್ದ ಮಗನಿಗೆ ಬೇರೊಬ್ಬರು ಆಧಾರವಾಗಬೇಕಿದೆ. ಆದರೂ ತನ್ನ ಮಕ್ಕಳು, ತಂದೆ-ತಾಯಿಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು. ಅಲ್ಲದೇ ಯಾರಿಗೂ ಹೊರೆಯಾಗದಂತೆ ತನ್ನ ಕಾಲ ಮೇಲೆ ನಿಲ್ಲಬೇಕು ಎಂಬ ಆಸೆಯನ್ನಿಟ್ಟುಕೊಂಡಿರುವ ವಿಕಲಚೇತನರೊಬ್ಬರು ಸಹಾಯ ಕೇಳಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಕೈ ಕಾಲಿನ ಬೆರಳು ಅಂಟಿಕೊಂಡು, ಓಡಾಡಲು ಕಷ್ಟ ಪಡುತ್ತಿರುವ ಅಪ್ಪ, ಮಗ ಮತ್ತು ಮೊಮ್ಮಗಳು, ವೃದ್ಧ ತಂದೆ ರಾಮಯ್ಯ, ಮಗ ರಾಮಚಂದ್ರು, ಮೊಮ್ಮಗಳು ಸಹನಾ, ರಾಮನಗರ ತಾಲೂಕಿನ ಚಿಕ್ಕೆಗೌಡನದೊಡ್ಡಿ ಗ್ರಾಮದ ಇರುಳಿಗರ ಕಾಲೋನಿಯ ನಿವಾಸಿಗಳು. ವೃದ್ಧ ತಂದೆಯ ಕೈ ಕಾಲುಗಳಲ್ಲಿ ಬೆರಳು ಕೂಡಿಕೊಡಿದ್ದು ಅನುವಂಶೀಯವಾಗಿ ಮಗ ರಾಮಚಂದ್ರು ಮತ್ತು ಮೊಮ್ಮಗಳಿಗೆ ಕೈಕಾಲಿನ ಬೆರಳುಗಳು ಕೂಡಿಕೊಂಡು ಓಡಾಡಲು ಕಷ್ಟ ಪಡುತ್ತಿದ್ದಾರೆ.

ಬಡತನದಲ್ಲಿ ಜೀವನ ಸಾಗಿಸುತ್ತಿರುವ ರಾಮಚಂದ್ರು ಖಾಸಗಿ ರೆಸಾರ್ಟ್‍ನಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳು ಸಹನಾಗೆ ಸಾಲ ಮಾಡಿ ಶಸ್ತ್ರಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಇಳಿ ವಯಸ್ಸಿನಲ್ಲಿರುವ ತಂದೆ, ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು. ತನ್ನ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂಬ ಆಸೆಯಿಟ್ಟುಕೊಂಡಿರುವ ರಾಮಚಂದ್ರು ಪ್ರತಿನಿತ್ಯ 2.5 ಕೀಲೋ ಮೀಟರ್ ಕಾಡಿನ ಮಾರ್ಗವಾಗಿ ನಡೆದುಕೊಂಡು ಹೋಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಆರು ಬೆರಳುಗಳು ಕೂಡಿಕೊಂಡಿರುವುದರಿಂದ ಓಡಾಡಲು ನೋವಾಗುತ್ತಿದ್ದು ಕಷ್ಟ ಪಡುತ್ತಿದ್ದಾರೆ.

ವಿಕಲಾಂಗತೆಯನ್ನು ಮೆಟ್ಟಿ ಶ್ರಮ ಪಟ್ಟು ಕುಟುಂಬದ ಜವಾಬ್ದಾರಿಯನ್ನು ಹೊತ್ತು ಸ್ವಾಭಿಮಾನದ ಜೀವನ ಮಾಡುತ್ತಿರುವ ರಾಮಚಂದ್ರು ದಿನ ನಿತ್ಯ ಓಡಾಡಲು ಕಷ್ಟಪಡುತ್ತಿದ್ದಾರೆ. ಯಾರಾದರು ದಾನಿಗಳು ಟ್ರೈಸಿಕಲ್ ನೀಡಿ ನಮ್ಮ ಬದುಕಿಗೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಮನವಿ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=XrYK9UbhKN4

Share This Article
Leave a Comment

Leave a Reply

Your email address will not be published. Required fields are marked *