ಪರಿಸರ ದೇಗುಲ ಎನಿಸಿಕೊಂಡಿರೋ ನೆಲಮಂಗಲದ ಈ ಸರ್ಕಾರಿ ಶಾಲೆಗೆ ಬೇಕಿದೆ ಪ್ರೊಜೆಕ್ಟರ್

Public TV
2 Min Read

ಬೆಂಗಳೂರು: ಖಾಸಗಿ ಶಾಲೆಗಳ ಹಾವಳಿಗಳ ನಡುವೆ ಗ್ರಾಮೀಣ ಪ್ರದೇಶದ ಹಳ್ಳಿಗಾಡುಗಳ ಸರ್ಕಾರಿ ಶಾಲೆಗಳು ಅವನತಿಯತ್ತ ಮುಖ ಮಾಡಿವೆ. ಆದರೆ ಸರ್ಕಾರಿ ಶಾಲೆಯೊಂದು ಸರ್ಕಾರದ ಅನುದಾನ, ಗ್ರಾಮಸ್ಥರ ಹಾಗೂ ಹಳೇ ವಿದ್ಯಾರ್ಥಿಗಳ ನೆರವಿನಿಂದ ಎಲ್ಲಾ ರೀತಿಯಲ್ಲೂ ಸದೃಢವಾಗಿ ಮಕ್ಕಳಿಗೆ ಓದು ಕಲಿಸಲು ಪೂರಕವಾಗಿದೆ. ಆದ್ರೆ ಮಕ್ಕಳಿಗೆ ಪ್ರಚಲಿತ ವಿದ್ಯಾಮಾನದ ಕೊರತೆ ಎದ್ದುಕಾಣಿಸುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಚೋನಾಯಕನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳ ಹಾವಳಿಗಳ ನಡುವೆ ಶಿಕ್ಷಕರ ಕೌಶಲ್ಯದಿಂದ 2014 ರಲ್ಲಿ ಜಿಲ್ಲಾ ಪರಿಸರ ಮಿತ್ರ ಶಾಲೆ, ಪರಿಸರ ದೇಗುಲ ಎಂಬ ಪ್ರಶಸ್ತಿಗೆ ಭಾಜನವಾಗಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯಿಂದ ಬಿರುದು ಗಳಿಸಿತ್ತು.

ನೆಲಮಂಗಲ ಪಟ್ಟಣಕ್ಕೆ ಸಮೀಪವಿರುವ ಈ ಶಾಲೆ 1961-62ರಲ್ಲಿ ಪ್ರಾರಂಭವಾಗಿದ್ದು ಅಂದಿನಿಂದ 10 ವರ್ಷಗಳ ಕಾಲ, ಸರ್ಕಾರಿ ಕಟ್ಟಡವಿಲ್ಲದೆ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲಾಗಿತ್ತು. ನಂತರದಲ್ಲಿ ಶಾಲೆಯ ನಿರ್ಮಾಣಕ್ಕೆ ಗ್ರಾಮದ ಸಿದ್ದಲಿಂಗಯ್ಯ ಹಾಗೂ ಸಹೋದರರು 10 ಕುಂಟೆಯ ಖಾಲಿ ನಿವೇಶನವನ್ನು ದಾನ ಮಾಡಿದ್ರು. ಆಗ ಸರ್ಕಾರದಿಂದ ಒಂದು ಕೊಠಡಿ ನಿರ್ಮಾಣ ಮಾಡಿದ್ದು, ಅಂದಿನಿಂದ ಇಂದಿನ ವರೆಗೂ ಉತ್ತಮವಾಗಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲದೆ ವಿದ್ಯಾಭ್ಯಾಸ ಸಾಗುತ್ತಿದೆ.

ಈ ಶಾಲೆಯಲ್ಲಿ 15 ಮಂದಿ ವಿದ್ಯಾರ್ಥಿಗಳು ಪಾಠ ಪ್ರವಚನ ಕಲಿಯುತ್ತಿರುವ ಜೊತೆಗೆ, ನೂರಾರು ಬಗೆಯ ಗಿಡ ಮೂಲಿಕೆಯ ಔಷಧಿ ಸಸ್ಯಗಳನ್ನ ಶಿಕ್ಷಕರು ವಿದ್ಯಾರ್ಥಿಗಳ ನೆರವಿನಿಂದ ಪಾಲನೆ-ಪೋಷಣೆ ಮಾಡುತ್ತಿದ್ದಾರೆ. 200ಕ್ಕೂ ಹೆಚ್ಚು ವಿವಿಧ ಜಾತಿಯ ಮರ-ಗಿಡಗಳನ್ನ ಬೆಳಸಲಾಗುತ್ತಿದೆ. ಈ ಮರ ಗಿಡಗಳಿಂದ ಉತ್ಪತ್ತಿಯಾಗುವ ಎಲೆ ಕಡ್ಡಿಗಳನ್ನು ಸಾವಯವ ಗುಂಡಿಯಲ್ಲಿ ಶೇಖರಣೆ ಮಾಡಿ ಸಾವಯವ ಗೊಬ್ಬರವನ್ನಾಗಿ ಮಾರ್ಪಡು ಮಾಡಲಾಗುತ್ತದೆ. ಅಲ್ಲದೆ ಪುಟಾಣಿ ಮಕ್ಕಳಿಗೆ ನೆರವಾಗಲು ಜಿಲ್ಲಾ ಪರಿಸರ ಮಿತ್ರ ಶಾಲೆ ಹಾಗೂ ಪರಿಸರ ದೇಗುಲ ಎಂಬ ಪ್ರಶಸ್ತಿಯಲ್ಲಿ ಬಂದ 20 ಸಾವಿರ ರೂಪಾಯಿಯನ್ನು ಬಳಸಿ ನಾಡಿನ ಸಂಸ್ಕೃತಿ ಹಾಗೂ ತಾಲೂಕಿನ ಸಂಸ್ಕೃತಿಯನ್ನ ಮೆರೆಯುವ ಚಿತ್ರಗಳನ್ನು ಶಾಲೆ ತುಂಬೆಲ್ಲಾ ಚಿತ್ರಿಸಿ ಶಿಕ್ಷಕರು ಮಾದರಿಯಾಗಿದ್ದಾರೆ. ಹೀಗಾಗಿ ಇನ್ನಷ್ಟು ಈ ಗ್ರಾಮದ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ, ಆಧುನಿಕ ಸ್ಮಾರ್ಟ್‍ಕ್ಲಾಸ್ ಯೋಜನೆಗಾಗಿ ಪ್ರೊಜೆಕ್ಟರ್ ಬೇಕಾಗಿದೆ ಅಂತಾರೆ ಈ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು.

ಒಟ್ಟಾರೆ ಖಾಸಗಿ ಶಾಲೆಗಳ ಹಾವಳಿಗಳ ಮಧ್ಯೆ ಸರ್ಕಾರಿ ಶಾಲೆ, ರಾಜ್ಯಕ್ಕೆ ಮಾದರಿಯಾಗಿದೆ. ಈ ಗ್ರಾಮೀಣ ಶಾಲೆಯ ಮಕ್ಕಳು ಇನ್ನಷ್ಟು ಓದಿ ಕಲಿಯಲು ಹಾಗೂ ಪ್ರಚಲಿತ ವಿದ್ಯಮಾನದ ಅರಿವು ಪಡೆಯಲು ಸ್ಮಾರ್ಟ್‍ಕ್ಲಾಸ್ ಯೋಜನೆಗಾಗಿ ಪ್ರೋಜೆಕ್ಟರ್ ನೆರವಿನ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *