ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಯುವಕನಿಗೆ ಬೇಕಿದೆ ಸೂಕ್ತ ಚಿಕಿತ್ಸೆ

Public TV
2 Min Read

ಬೆಂಗಳೂರು: 25 ವರ್ಷದ ಯುವಕನಿಗೆ ಬದುಕಿನಲ್ಲಿ ಏನಾನದರೂ ಸಾಧಿಸಬೇಕು, ತಾಯಿ-ತಂಗಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಡಿಗ್ರಿ ಮಾಡುತ್ತಿದ್ದನು. ಅದರೆ ವಿಧಿಯಾಟವೇ ಬೇರೆಯಾಗಿತ್ತು. ವಾಂತಿ, ಭೇದಿ ಅಂತಾ ಆಸ್ಪತ್ರೆ ಸೇರಿದ್ದ ಯುವಕ ಕಳೆದ 6 ವರ್ಷದಿಂದ ಕಾಲುಗಳ ಸ್ವಾಧೀನ ಕಳೆದುಕೊಂಡು ಮನೆಗೆ ಆಸರೆಯಾಗಬೇಕಿದ್ದವ ತಾಯಿ ತಂಗಿಯ ಆರೈಕೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ.

ಹೌದು. ಯುವಕ ಅಭಿಷೇಕ್ ಇದೀಗ ಅಮ್ಮ ಮತ್ತು ತಂಗಿಯ ಆರೈಕೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ. ಬೆಂಗಳೂರಿನ ನಾಗರಬಾವಿ ಸಮೀಪ ಕೆಂಗೆಂಟೆ ನಿವಾಸಿಯಾಗಿರೋ ಈತ ತಾಯಿ ಮಂಗಳ, ತಂಗಿ ಲಕ್ಷ್ಮೀಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಮಕ್ಕಳು ಸಣ್ಣವರಾಗಿದ್ದಾಗಲೇ ತಂದೆ ಕುಡಿತದ ಚಟಕ್ಕೆ ಬಿದ್ದು ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಕುಟುಂಬದ ಜವಾಬ್ದಾರಿಯನ್ನು ಹೊತ್ತ ತಾಯಿ ತನ್ನ ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಚೆನ್ನಾಗಿ ನೋಡಿಕೊಂಡಿದ್ದಾರೆ.

6 ವರ್ಷಗಳ ಹಿಂದೆ ತಾಯಿಯ ಕಷ್ಟವನ್ನ ಅರಿತಿದ್ದ ಮಗ ಅಭಿಷೇಕ್, ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ. ಇನ್ನೇನು ತಾಯಿ ಮತ್ತು ತಂಗಿಯನ್ನು ಸುಖವಾಗಿ ನೋಡಿಕೊಳ್ಳಲು ಉದ್ಯೋಗ ಮಾಡಬೇಕೆಂಬ ಖುಷಿಯಲ್ಲಿದ್ದನು. ಆದ್ರೆ ಅಭಿಷೇಕ್‍ಗೆ ವಾಂತಿ-ಭೇದಿ ಶುರುವಾಗಿ ಮೂರ್ಛೆ ರೋಗ ಆವರಿಸಿತ್ತು. ಮಗನ ಅವಸ್ಥೆಯನ್ನು ಕಂಡು ತಾಯಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ವೈದ್ಯರ ಎಡವಟ್ಟೋ ಏನೋ ಡಾಕ್ಟರ್ ನೀಡಿದ ಮಾತ್ರೆ ಸೇವಿಸಿದ ಬಳಿಕ ಹಂತ ಹಂತವಾಗಿ ಎರಡೂ ಕಾಲುಗಳ ಶಕ್ತಿ ಕುಂಠಿತಗೊಂಡಿದ್ದು, ಮಾತನಾಡಲು, ಓಡಾಡಲು ಹಾಗೂ ತನ್ನ ಕೆಲಸವನ್ನೂ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಕಾಲುಗಳು ಸ್ವಾಧೀನತೆ ಇಲ್ಲದೇ ಅಭಿಷೇಕ್ ಹಾಸಿಗೆ ಹಿಡಿದಿದ್ದಾನೆ.

ಮಗನಿಗೆ ಊಟ ತಿನ್ನಿಸುವುದರಿಂದ ಹಿಡಿದು ದಿನನಿತ್ಯ ಕರ್ಮಾದಿಗಳಿಗೆ ತಾಯಿ ಮತ್ತು ತಂಗಿ ಆರೈಕೆ ಮಾಡುತ್ತಿದ್ದಾರೆ. ಈತನನ್ನು ನೋಡಿಕೊಳ್ಳಲು ಒಬ್ಬರಾದರೂ ಮನೆಯಲ್ಲಿ ಇರಲೇಬೇಕು. ತಂಗಿ ಓದು ಮುಗಿಸಿ ಮನೇಲಿದ್ರೆ ತಾಯಿ ಖಾಸಗಿ ಶಾಲೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದಾರೆ. ಬರುವ ಹಣದಿಂದ ಮಗನ ಔಷಧಿ, ಬಾಡಿಗೆಗೆ ಸಾಕಾಗುತ್ತಿದೆ.

ಗಂಡು ದಿಕ್ಕಿಲ್ಲದ ಮನೆಗೆ ಆಸರೆಯಾಗಬೇಕಿದ್ದ ಮಗ ಹಾಸಿಗೆ ಹಿಡಿದಿದ್ದು ಜೀವನ ಸಾಗಿಸಲು ಕಷ್ಟಕರವಾಗಿದೆ. ಕಷ್ಟಪಟ್ಟು ಮಾತನಾಡಲು ಯತ್ನಿಸಿದ ಅಭಿಷೇಕ್, ನನಗೆ ಸಹಾಯ ಮಾಡಿ, ನನ್ನ ಜೀವನಕ್ಕೆ ಆಧಾರವಾಗಿ ಎಂದು ಕೇಳಿಕೊಳ್ಳುತ್ತಿದ್ದಾನೆ. ಇತ್ತ ಮಗ ದುಡಿದು ಅವನ ಕಾಲ ಮೇಲೆ ನಿಂತು ಜೀವನ ಮಾಡಲು ಚಿಕಿತ್ಸೆ ಕೊಡಿಸಿ, ಪಿಂಚಣಿ ಸೌಲಭ್ಯ ಕೊಡಿಸಿ ಎಂದು ತಾಯಿ ಮತ್ತು ತಂಗಿ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಬಯಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

https://www.youtube.com/watch?v=b2g_gWGZ4iQ

Share This Article
Leave a Comment

Leave a Reply

Your email address will not be published. Required fields are marked *