ಬೆಳಗಾವಿಯಲ್ಲಿ 31 ಕೃಷ್ಣಮೃಗಗಳ ದಾರುಣ ಸಾವಿಗೆ HS ಬ್ಯಾಕ್ಟೀರಿಯಾ ಕಾರಣ: ಪರೀಕ್ಷೆಯಿಂದ ದೃಢ

Public TV
1 Min Read

ಬೆಳಗಾವಿ: ತಾಲೂಕಿನ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 31 ಕೃಷ್ಣಮೃಗಗಳ ದಾರುಣ ಸಾವಿಗೆ ಹೆಚ್‌ಎಸ್‌ ಬ್ಯಾಕ್ಟೀರಿಯಾ ಕಾರಣವಾಗಿದೆ. ಸಾಂಕ್ರಾಮಿಕ ರೋಗದಿಂದ ಕೃಷ್ಣಮೃಗಗಳು ಸಾವನ್ನಪ್ಪಿವೆ ಎಂದು ದೃಢಪಟ್ಟಿದೆ.

ಮಾಧ್ಯಮಗಳಿಗೆ ಮೃಗಾಲಯದ ಎಸಿಎಫ್ ನಾಗರಾಜ್ ಬಾಳೆಹೊಸೂರ್ ಮಾಹಿತಿ ನೀಡಿದ್ದಾರೆ. 31 ಕೃಷ್ಣಮೃಗಗಳ ಸಾವಿಗೆ (ಗಳಲೆ) ಹಿಮೋರೆಜಿಕ್ ಸೆಪ್ಟಿಸೆಮೀಯಾ ಕಾರಣ ಎನ್ನುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಅ.13ರಿಂದ 16ರವರೆಗೆ 31 ಕೃಷ್ಣಮೃಗಗಳು ಸಾವಿಗೀಡಗಿದ್ದವು. ಕೃಷ್ಣಮೃಗಗಳ ಸಾವು ಹಿನ್ನೆಲೆ ಬನ್ನೇರುಘಟ್ಟ, ಬೆಂಗಳೂರಿನ ತಜ್ಞ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವೈರಾಣು ತಜ್ಞ ಡಾ.ಚಂದ್ರಶೇಖರ ಅವರು ಮೃಗಾಲಯದ ಅಧಿಕಾರಿಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಕೃಷ್ಣಮೃಗಗಳು HS ಬ್ಯಾಕ್ಟೀರಿಯಾದಿಂದ ಸಾವಾಗಿದೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಹಠಾತ್ ತಾಪಮಾನ ಕುಸಿತ, ಒತ್ತಡದಿಂದಲೂ ಕೃಷ್ಣಮೃಗಗಳ ಮರಣಕ್ಕೆ ಕಾರಣ ಅಂತಲೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಕೃಷ್ಣಮೃಗಗಳ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ. ಬದುಕುಳಿದ ಏಳು ಕೃಷ್ಣಮೃಗಗಳಿಗೆ ತೀವ್ರ ನಿಗಾದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಈಗಾಗಲೇ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಲಾಗಿದೆ. ಮೃಗಾಲಯದಲ್ಲಿರುವ ಹುಲಿ, ಸಿಂಹ, ಚಿರತೆ, ಕತ್ತೆಕಿರುಬಗಳು, ಕರಡಿಗಳು ವಿವಿಧ ಜಿಂಕೆ ಪ್ರಬೇಧಗಳಿವೆ. ತುರ್ತು ಪ್ರೋಟೋಕಾಲ್ ಜಾರಿಗೊಳಿಸುವಂತೆ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

Share This Article