ಬೆಳಗಾವಿ: ಜಿಲ್ಲೆಯಲ್ಲಿ ಹೀರೇಬಾಗೇವಾಡಿಯ ಯುವಕ ಆತ್ಮಹತ್ಯೆ ಮಾಡಿಕೊಂಡಿಲ್ಲ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಸಂಸದ ಸುರೇಶ್ ಅಂಗಡಿ ಆರೋಪಿಸಿದ್ದಾರೆ.
ಪ್ರಕರಣದ ಕುರಿತು ಟ್ವೀಟ್ ಮಾಡಿರುವ ಸಂಸದರು, ಶಿವಕುಮಾರ್ ಉಪ್ಪಾರ ಗೋವುಗಳನ್ನು ತುಂಬಾ ಪ್ರೀತಿಸುತ್ತಿದ್ದ ಹಾಗೂ ಗೋವು ಕಳ್ಳ ಸಾಗಾಣಿಕೆಯನ್ನು ನಿಲ್ಲಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಕೊಲೆ ಮಾಡಿ, ನೇಣು ಹಾಕಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶೀಘ್ರವೇ ತನಿಖೆ ನಡೆಸಲು ಸಿಎಂ ಕುಮಾರಸ್ವಾಮಿ ಅವರು ಪೊಲಿಸರಿಗೆ ಆದೇಶ ನೀಡಬೇಕು. ಪೊಲೀಸರು 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ಶಿವಕುಮಾರ್ ಉಪ್ಪಾರ(19) ಅನುಮಾನಸ್ಪದವಾಗಿ ಸಾವನ್ನಪ್ಪಿದ ಯುವಕ. ಹಿರೇಬಾಗೇವಾಡಿ ಗ್ರಾಮದ ಎಪಿಎಂಸಿ ಶೌಚಾಲಯದಲ್ಲಿ ಯುವಕ ಮೃತ ದೇಹವು ಪತ್ತೆಯಾಗಿತ್ತು. ಮಗನ ಶವವನ್ನು ನೋಡಿದ ಕುಟುಂಬಸ್ಥರು, ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.