ಏಕವಚನದಲ್ಲಿಯೇ ಕಿತ್ತಾಡಿಕೊಂಡ ಶಿವಲಿಂಗೇಗೌಡ, ರೇಣುಕಾಚಾರ್ಯ!

Public TV
2 Min Read

ಬೆಳಗಾವಿ: ಬರಗಾಲದ ಮೇಲಿನ ಅಲ್ಪಾವಧಿ ಚರ್ಚೆ ವೇಳೆ ಶಾಸಕರಾದ ಶಿವಲಿಂಗೇಗೌಡ ಹಾಗೂ ರೇಣುಕಾಚಾರ್ಯ ಅವರು ಏಕವಚದಲ್ಲಿಯೇ ಕಿತ್ತಾಡಿಕೊಂಡಿದ್ದಾರೆ.

ಭೋಜನ ವಿರಾಮದ ಬಳಿಕ ಬರಗಾಲದ ಮೇಲಿನ ಅಲ್ಪಾವಧಿ ಚರ್ಚೆಯನ್ನು ಮುಂದುವರಿಸುವಂತೆ ಆಗ್ರಹಿಸಿದ ವಿಪಕ್ಷನಾಯಕ ಬಿ.ಎಸ್.ಯಡಿಯೂರಪ್ಪ ಅವರು, ಚರ್ಚೆಗೆ ನಾವು ಸಿದ್ಧವಿದ್ದೇವೆ. ಆದರೆ ಸದನ ಪುನರಾರಂಭ ಮಾಡಲು ಒಂದು ಗಂಟೆ ವಿಳಂಬ ಮಾಡಿದ್ದು ಏಕೆ? ಸದನ ನಡೆಸಲು ಆಸಕ್ತಿ ಇಲ್ಲದಿದ್ದರೆ ಅಧಿವೇಶನವನ್ನು ಮುಂದೂಡಿ ಮನೆಗೆ ಹೋಗಿ. ಕಾಟಾಚಾರಕ್ಕೆ ಏಕೆ ಮಾಡುತ್ತೀರಾ ಎಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು, ಸದನ ನಡೆಸುವವರು ಸಭಾಧ್ಯಕ್ಷರೋ? ಪ್ರತಿಪಕ್ಷ ನಾಯಕರೋ ಎಂದು ಪ್ರಶ್ನಿಸಿ ಕಿಡಿಕಾರಿದರು. ಮಧ್ಯಪ್ರವೇಶಿಸಿದ ಬಿಜೆಪಿಯ ರೇಣುಕಾಚಾರ್ಯ ಅವರು ಏರು ಧ್ವನಿಯಲ್ಲಿ, ನಮ್ಮ ಕ್ಷೇತ್ರಗಳಲ್ಲಿ ತೀವ್ರ ಬರವಿದೆ. ಈ ಕುರಿತು ಮಾತನಾಡುವುದು ನಮ್ಮ ಹಕ್ಕು. ನೀನು ಸುಮ್ಮನೆ ಕುಳಿತುಕೋ ಸಾಕು ಎಂದು ಟಾಂಗ್ ಕೊಟ್ಟರು.

ನಾನು ನಿನ್ನ ಜೊತೆ ಮಾತನಾಡುತ್ತಿಲ್ಲ. ಅಧ್ಯಕ್ಷರಿಗೆ ಹೇಳುತ್ತಿರುವೆ. ಸುಮ್ನೆ ಕುಳಿತುಕೊಳ್ಳಿ ಎಂದು ಶಿವಲಿಂಗೇಗೌಡ ತಿರುಗೇಟು ನೀಡಿದರು. ಇದಕ್ಕೆ ಪ್ರತಿಯಾಗಿ ಏಕವಚನದಲ್ಲಿಯೇ, ಸದನ ನಿನ್ನದ್ದಷ್ಟೇ ಸ್ವತ್ತಲ್ಲ. ನಮ್ಮದು ಸ್ವತ್ತಿದೆ ಎಂದು ರೇಣುಕಾಚಾರ್ಯ ಗರಂ ಆದರು.

ಶಾಸಕರ ವಾಕ್ ಸಮರದಲ್ಲಿ ಮಧ್ಯಪ್ರವೇಶಿಸಿದ ಸಚಿವ ಆರ್.ವಿ.ದೇಶಪಾಂಡೆ ಅವರು, ಅಜೆಂಡಾ ಪ್ರಕಾರವೇ ಸದನ ನಡೆಯುತ್ತಿದೆ. ಮುಖ್ಯಮಂತ್ರಿ ಹಾಗೂ ನಾನು ಮೇಲ್ಮನೆಯಲ್ಲಿದ್ದೇವು. ಹೀಗಾಗಿ ಇಲ್ಲಿ ಏಳು ಸಚಿವರಿದ್ದರು ಎಂದು ಸ್ಪಷ್ಟನೆ ನೀಡಿದರು.

ದೇಶಾಪಂಡೆ ಉತ್ತರಕ್ಕೆ ವಿರೋಧ ಪಕ್ಷದ ಶಾಸಕರು ಒಟ್ಟಾಗಿ ಧ್ವನಿಗೂಡಿಸಿ, ಸುಳ್ಳು ಹೇಳಬೇಡಿ. ಇಲ್ಲಿ ಇದ್ದಿದ್ದು ಮೂವರೇ ಸಚಿವರು ಎಂದು ಕೂಗಾಡಿದರು. ಬಳಿಕ ಎದ್ದು ನಿಂತ ಆರ್.ವಿ.ದೇಶಪಾಂಡೆ, ಸದನದಲ್ಲಿ ಪ್ರತಿಪಕ್ಷ ಇರಬೇಕು. ನೀವು ವಾಕೌಟ್ ಮಾಡಬಾರದು. ಸಭಾಧ್ಯಕ್ಷರು ಕೊಟ್ಟ ಅವಕಾಶವನ್ನು ಪ್ರತಿಪಕ್ಷ ಸದುಪಯೋಗ ಮಾಡಿಕೊಳ್ಳಬೇಕು. ಸದನ ನಡೆಸುವ ಜವಾಬ್ದಾರಿ ಕೇವಲ ಕಾಂಗ್ರೆಸ್ ಮೇಲೆ ಮಾತ್ರ ಇಲ್ಲ. ಪ್ರತಿಪಕ್ಷಗಳಿಗೂ ಇದೆ. ಅವಕಾಶ ಕೊಡಬೇಕೋ ಬೇಡವೋ ಎಂಬುದನ್ನು ಸ್ಪೀಕರ್ ನಿರ್ಧಾರಕ್ಕೆ ಬಿಡೋಣ ಎಂದು ಸಮಜಾಯಿಸಿ ಪ್ರತಿಕ್ರಿಯೆ ನೀಡಿದರು.

https://www.youtube.com/watch?v=Qo4D62V6SEA

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *