ಕೆಪಿಎಂಇ ಮಸೂದೆ ಮಂಡನೆ: ಮೂಲ ಮಸೂದೆಯಲ್ಲಿ ಏನಿತ್ತು? ಈಗ ಬದಲಾಗಿದ್ದು ಏನು?

Public TV
1 Min Read

ಬೆಳಗಾವಿ: ವೈದ್ಯರ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ಮಸೂದೆ(ಕೆಪಿಎಂಇ) ವಿಧಾನಸಭೆಯಲ್ಲಿ ಮಂಡನೆಯಾಗಿದೆ.

ಖಾಸಗಿ ವೈದ್ಯರ ಮುಷ್ಕರದಿಂದ 60ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಹಠ ಸಾಧಿಸಿ ಕೊನೆಗೂ ಮಂಡಿಸಿದ್ದಾರೆ.

ಮಸೂದೆಯಲ್ಲಿರುವ ಪ್ರಮುಖ ಅಂಶಗಳು:
ಮೂಲ ಮಸೂದೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟರೆ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಅಂಶವಿದೆ ಎಂದು ಹೇಳಲಾಗಿತ್ತು. ಆದರೆ ಮಂಡನೆಯಾಗಿರುವ ಮಸೂದೆಯಲ್ಲಿ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪವನ್ನು ಕೈಬಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಕಡ್ಡಾಯವಾಗಿ ಪ್ರದರ್ಶಿಸಬೇಕು, ಸರ್ಕಾರಿ ಯೋಜನೆಯಡಿ ನೀಡುವ ಚಿಕಿತ್ಸೆಗಳಿಗೆ ಸರ್ಕಾರವೇ ದರ ನಿಗದಿ ಪಡಿಸಬೇಕು ಎನ್ನುವ ಅಂಶವಿದೆ.

ನಿಗದಿಯಾಗಿರುವ ದರ, ವೆಚ್ಚದ ಪಟ್ಟಿಯನ್ನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೆಬ್‍ಸೈಟ್‍ನಲ್ಲಿ ಪ್ರದರ್ಶಿಸಬೇಕು. ನಿಗದಿತ ಅವಧಿಯೊಳಗೆ ಹೆಚ್ಚಿಗೆ ಕಾಯಿಸದೇ ರೋಗಿಗಳೊಂದಿಗೆ ಸಮಾಲೋಚನೆ ಮಾಡಬೇಕು. ಸಮಾಲೋಚನಾ ಕೊಠಡಿಗೆ ರೋಗಿಯ ಸಂಬಂಧಿ ಅಥವಾ ಸ್ನೇಹಿತರಿಗೆ ಅವಕಾಶ ನೀಡಬೇಕು ಎನ್ನುವ ಅಂಶಗಳು ಮಸೂದೆಯಲ್ಲಿದೆ.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕುಂದುಕೊರತೆ ದೂರು ಪ್ರಾಧಿಕಾರ ರಚನೆಯಾಗಲಿದ್ದು, ಈ ಸಮಿತಿಯಲ್ಲಿ ಡಿಎಚ್‍ಓ, ಜಿಲ್ಲಾ ಆಯುಷ್ ಅಧಿಕಾರಿ, ಐಎಂಎ ಓರ್ವ ಪ್ರತಿನಿಧಿ, ಜಿಲ್ಲಾಮಟ್ಟದ ಮಹಿಳಾ ಪ್ರತಿನಿಧಿ ಇರುತ್ತಾರೆ. ದೂರು ಪ್ರಾಧಿಕಾರದಲ್ಲಿ ವಾದಿಸಲು ಅವಕಾಶ ನೀಡಲಾಗಿದ್ದು, ಆರೋಪಿತ ವೈದ್ಯರು ಅಥವಾ ಸಂಸ್ಥೆ ವಕೀಲರನ್ನು ನೇಮಿಸಿಕೊಳ್ಳಬಹುದು. ತುರ್ತು ಚಿಕಿತ್ಸಾ ಸಮಯದಲ್ಲಿ ಮುಂಗಡ ಹಣಕ್ಕೆ ರೋಗಿಗಳ ಸಂಬಂಧಿಕರಿಗೆ ಒತ್ತಾಯಿಸುವಂತಿಲ್ಲ. ಅಷ್ಟೇ ಅಲ್ಲದೇ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದರೆ ಶವ ನೀಡದೇ ಬಾಕಿ ಹಣಕ್ಕೆ ಒತ್ತಾಯಿಸಬಾರದು ಎನ್ನುವ ಅಂಶಗಳಿವೆ.

ಮೂಲ ಮಸೂದೆಯಲ್ಲಿ ಆಸ್ಪತ್ರೆಯಲ್ಲಿ ನೀಡಲಾಗುವ ಎಲ್ಲ ಚಿಕಿತ್ಸೆಗಳಿಗೆ ಆಸ್ಪತ್ರೆಗಳು ಎಷ್ಟು ದರವನ್ನು ವಿಧಿಸಬೇಕು ಎನ್ನುವ ಅಂಶವನ್ನು ಸರ್ಕಾರವೇ ನಿಗದಿ ಪಡಿಸಲಿದೆ. ಸರ್ಕಾರ ನಿಗದಿಪಡಿಸಿದ ಪಟ್ಟಿಯನ್ನು ಆಸ್ಪತ್ರೆಗಳು ಪ್ರದರ್ಶಿಸಬೇಕು ಮತ್ತು ಅಷ್ಟೇ ದರವನ್ನು ಪಡೆಯಬೇಕು ಎನ್ನುವ ಅಂಶವಿತ್ತು. ಆದರೆ ವೈದ್ಯರ ಜೊತೆಗೆ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ನಡೆಸಿದ ಸಂಧಾನ ಸಭೆಯ ಬಳಿಕ ಈ ಅಂಶಗಳನ್ನು ಕೈಬಿಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *