ಬೆಳಗಾವಿಯಿಂದ ಬಂಡಾಯ ಆರಂಭ, ಸರ್ಕಾರ ಕೇವಲ 6 ತಿಂಗಳು ಮಾತ್ರ ಇರುತ್ತೆ- ಶಾಸಕ ಅಮರೇಗೌಡ

Public TV
2 Min Read

ಕೊಪ್ಪಳ: ಬಿಜೆಪಿ ಸರ್ಕಾರ ಕೇವಲ ಆರು ತಿಂಗಳು ಮಾತ್ರ ಇರುತ್ತದೆ ಎಂದು ಕುಷ್ಟಗಿಯ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಪುರ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಕೊಪ್ಪಳದಲ್ಲಿ ಮಾತನಾಡಿದ ಅವರು, ಇಂದು ಬಿಜೆಪಿ ಕ್ಯಾಬಿನೆಟ್ ವಿಸ್ತರಿಸಿದ್ದಾರೆ. ಆದರೆ, ಇದು ಹೆಚ್ಚು ಕಾಲ ಉಳಿಯುವದಿಲ್ಲ. ಬೆಜೆಪಿ ಸರ್ಕಾರ ಆರು ತಿಂಗಳ ಮೇಲೆ ಆಡಳಿತದಲ್ಲಿರುವುದಿಲ್ಲ. ಸರ್ಕಾರ ಬಿದ್ದು ಹೋಗಲಿದೆ. ಹಾಗಂತ ನಾವು ಬಿದ್ದು ಹೋಗಲಿ ಎಂದು ಹೇಳುವುದಿಲ್ಲ. ಆದರೆ, ಪರಿಸ್ಥಿತಿ ಹಾಗಿದೆ. ಹೀಗಾಗಿ ಯಡಿಯೂರಪ್ಪನವರ ಸರ್ಕಾರ 6 ತಿಂಗಳಿಗೂ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಎಲ್ಲವನ್ನೂ ಲೂಟಿ ಮಾಡಿ ಮನೆಗೆ ಹೋಗುತ್ತಾರೆ. ಇಲ್ಲವೆ ಬಡಿದಾಡಿ ಮನೆಗೆ ಹೋಗುತ್ತಾರೆ. ಪ್ರಮಾಣ ವಚನ ಸ್ವೀಕರಿಸಿದ ಎಲ್ಲರಿಗೂ ಒಳ್ಳೆಯದು ಆಗಲಿ. ಒಳ್ಳೆ ಆಡಳಿತ ಕೊಡಲಿ ಎಂದು ನಾವೆಲ್ಲ ಬೇಡಿಕೊಳ್ಳೋಣ. ಅವರ ಸರ್ಕಾರ ಬಿದ್ದು ಹೋಗಲಿ ಎನ್ನುವುದು ನಮ್ಮ ಮನಸ್ಸಿನಲ್ಲಿಲ್ಲ. ಆದರೆ, ಬೆಳಗಾವಿಯವರು ಸರ್ಕಾರ ಕೆಡವಲು ಈಗಾಗಲೇ ಆರಂಭ ಮಾಡಿದ್ದಾರೆ. ಇಂದು ಸಂಜೆಯೊಳಗೆ ಏನೆಲ್ಲಾ ಆಗತ್ತದೆ ಎನ್ನುವುದನ್ನು ಕಾದು ನೋಡಿ ಎಂದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಬೆಳಗಾವಿಯಲ್ಲಿ ಅವರ ಬೆಂಬಲಿಗರು ದಾಂಧಲೆ ಎಬ್ಬಿಸಿದ್ದರು. ಅಲ್ಲದೆ, ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಅತೃಪ್ತ ಶಾಸಕರು ಗೈರಾಗಿದ್ದಾರೆ. ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ, ತಿಪ್ಪಾರೆಡ್ಡಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ರಾಮದಾಸ್, ಶಿವನಗೌಡ ನಾಯಕ್, ಕೆ.ಜಿ.ಬೋಪಯ್ಯ ಸೇರಿದಂತೆ ಹಲವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಪಕ್ಷಕ್ಕೆ ನಿಷ್ಠೆಯಿಂದ ಇದ್ದವರು ತಮಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರು. ಆದರೆ ಅವರಿಗೆ ಯಾವುದೇ ಸ್ಥಾನ ಸಿಗಲಿಲ್ಲ. ಹೀಗಾಗಿ ಬಿಜೆಪಿಯಲ್ಲಿ ಬಂಡಾಯ ಎದ್ದಿದ್ದು, ಅತೃಪ್ತರು ಸಭೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಸರ್ಕಲ್‍ನಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯತ್ ಸದಸ್ಯರು, ನಗರಸಭೆ ಸದಸ್ಯರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ನಡು ರಸ್ತೆಯಲ್ಲಿ ಸ್ಕೂಟಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *