ಕೇಕ್‍ನಲ್ಲಿ ನಿದ್ರೆ ಮಾತ್ರೆ ಹಾಕಿ ಮಕ್ಕಳಿಗೆ ನೇಣು ಬಿಗಿದ ದಂಪತಿ

Public TV
3 Min Read

– ಒಂದೇ ಸೀರೆಯಲ್ಲಿ ನೇಣು ಹಾಕಿಕೊಂಡ ಸತಿಪತಿ
– ಸ್ವಾಭಿಮಾನಕ್ಕೆ ಮಕ್ಕಳನ್ನೇ ಕೊಂದ್ರಾ ದಂಪತಿ?
– ಗೆಳೆಯ ಸಾವನ್ನು ಕಂಡು ಬೆಚ್ಚಿ ಬಿದ್ದ ಬಾಲಕ

ಬೆಳಗಾವಿ: ಚಿನ್ನದಂತಹ ಸಂಸಾರದ ನಾಲ್ಕು ಜನರು ಈಗ ಬಾರದ ಲೋಕಕ್ಕೆ ತೆರಳಿದ್ದಾರೆ. ಅದು ಮನೆಯ ಯಜಮಾನನ ಒಂದು ತಪ್ಪು ನಿರ್ಧಾರದಿಂದಾಗಿ ಈ ಸ್ಥಿತಿ ಬಂದಿರುವುದು. ಏನೂ ಅರಿಯದ ತನ್ನೆರಡು ಮಕ್ಕಳಿಗೆ ನೇಣು ಹಾಕಿ ನಂತರ ದಂಪತಿ ಕೂಡ ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ ಇದು.

ಹೊಸೂರು ಗ್ರಾಮದ ಶರಣಾದ ಭೀಮಪ್ಪ ಚೂನಪ್ಪಗೋಳ (35), ಪತ್ನಿ ಮಂಜುಳಾ (30) ಮತ್ತು ತನ್ನೆರೆಡು ಮಕ್ಕಳಾದ ಪ್ರದೀಪ್(8), ಮೋಹನ್(6) ಆತ್ಮಹತ್ಯೆಗೆ ಶರಣಾದ ಕುಟುಂಬ. ಐದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಅಪ್ಪನನ್ನು ಪ್ರದೀಪ್ ಉಳಿಸಿಕೊಂಡಿದ್ದ. ಆದರೆ ಈಗ ಅದೇ ಮಗನನ್ನೇ ಭೀಮಪ್ಪ ಕೊಂದು ಬಿಟ್ಟ ಕಥೆ ಕಲ್ಲು ಹೃದಯವನ್ನೂ ಕರಿಸುವಂತಿದೆ.

ಭೀಮಪ್ಪ ಹಾಗೂ ಮಂಜುಳಾ ಶನಿವಾರ ಬೆಳಗ್ಗೆ ಗೋಕಾಕ್ ನಗರಕ್ಕೆ ಹೋಗಿದ್ದರು. ಮಂಜುಳಾ ತಾನು ಕಲೆತಿದ್ದ ಕಂಪ್ಯೂಟರ್ ಕೋರ್ಸ್ ನ ಸರ್ಟಿಫಿಕೇಟ್ ತೆಗೆದುಕೊಂಡು ಜತೆಗೆ ಮಕ್ಕಳಿಗೆ ತಿಂಡಿ ತಿನಸನ್ನು ಖರೀದಿಸಿ ಗ್ರಾಮಕ್ಕೆ ಮರಳಿದ್ದರು. ಹೀಗೆ ಮರಳಿ ಮನೆಗೆ ಬಂದ ದಂಪತಿ ಆಟವಾಡುತ್ತಿದ್ದ ಇಬ್ಬರು ಮಕ್ಕಳನ್ನು ಕರೆದು ಸಂತೆಯಲ್ಲಿ ತಂದಿದ್ದ ಕೇಕ್ ಕೊಟ್ಟಿದ್ದಾರೆ. ಅದರ ಜತೆಗೆ ತಾಯಿ ಟೀ ಮಾಡಿ ಮಕ್ಕಳಿಗೆ ಕುಡಿಸಿದ್ದಾಳೆ. ಆದರೆ ಇದೇ ಮಕ್ಕಳ ಕೊನೆ ಅಂತ ಆ ಎರಡು ಕಂದಮ್ಮಗಳಿಗೆ ಮಾತ್ರ ತಿಳಿದಿರಲಿಲ್ಲ.

ಸಂತೆಯಲ್ಲಿ ತಂದಿದ್ದ ಕೇಕ್‍ನಲ್ಲಿ ದಂಪತಿ ನಿದ್ರೆ ಮಾತ್ರೆ ಬೆರೆಸಿದ್ದರು. ಪರಿಣಾಮ ಮಕ್ಕಳು ನಿದ್ರೆಗೆ ಜಾದಿದ್ದರು. ಹೀಗೆ ನೆಮ್ಮದಿಯಿಂದ ಮಲಗಿದ್ದ ಮಕ್ಕಳನ್ನು ಮಂಜುಳಾ ಕೈಯಲ್ಲಿ ಎತ್ತಿ ಹಿಡದರೆ ಪಾಪಿ ತಂದೆ ಭೀಮಪ್ಪ ಸೀರೆಯಿಂದ ಕತ್ತಿಗೆ ನೇಣು ಬಿಗಿದಿದ್ದ. ಈ ರೀತಿ ಎರಡು ಮಕ್ಕಳನ್ನ ಸಾವಿನ ಮನೆಗೆ ಕಳುಹಿಸಿದ ದಂಪತಿ ನಂತರ ಒಂದೇ ಹಗ್ಗದಲ್ಲಿ ತಾವು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಒಂದಲ್ಲ ಎರಡಲ್ಲ ಐದು ಬಾರಿ ಈ ಭೀಮಪ್ಪ ಆತ್ಮಹತ್ಯೆಗೆ ಯತ್ನಿಸಿದ್ದ. ಮೂರು ಬಾರಿ ಬಾವಿಗೆ ಹಾರಿದ್ರೇ ಒಂದು ಬಾರಿ ಬೆಂಕಿ ಹಚ್ಚಿಕೊಂಡು ಇನ್ನೊಂದು ಬಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ಸಂದರ್ಭದಲ್ಲಿ ಮೊದಲ ಮಗ ಪ್ರದೀಪ್ ಕಿರುಚಾಡಿ ಅಕ್ಕಪಕ್ಕದವರನ್ನು ಕರೆದು ತಂದೆಯನ್ನ ಉಳಿಸಿಕೊಂಡಿದ್ದ.

ಪತ್ನಿ ಮಂಜುಳಾ ಪತಿಗಿಂತ ಹೆಚ್ಚು ಓದಿದ್ದು ನಾನೇ ಹೇಳಿದ್ದು ಮನೆಯಲ್ಲಿ ಆಗಬೇಕು ಎಂದು ಪಟ್ಟು ಹಿಡಿದಾಗೊಮ್ಮೆ ಈ ರೀತಿ ಭೀಮಪ್ಪ ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ಮಗನನ್ನ ಒಂದು ಬಾರಿ ಶಾಲೆಯ ಮೇಲೆಯೇ ಬಿಸಾಕಿ ಒಗೆದಿದ್ದ. ಇದರಿಂದಾಗಿ ಗ್ರಾಮಸ್ಥರು ಇವನ ಸಹವಾಸವೇ ಬೇಡ ಅಂತ ದೂರ ಉಳಿದಿದ್ದರು. ಆದರೆ ಶನಿವಾರ ಗೋಕಾಕ್‍ಗೆ ಹೋಗಿ ಬಂದ ದಂಪತಿ ಆತ್ಮಹತ್ಯೆಗೆ ಪ್ಲಾನ್ ಮಾಡಿದ್ದರು.

ಮಕ್ಕಳನ್ನ ಮೊದಲು ಸಾಯಿಸಿ ನಂತರ ಇಬ್ಬರು ಸಾಯಬೇಕು ಅಂತ ಭೀಮಪ್ಪ ಹಾಗೂ ಮಂಜುಳಾ ಪ್ಲಾನ್ ಮಾಡಿದ್ದರು. ಆದರೆ ಮಕ್ಕಳನ್ನ ಸಾಯಿಸಬೇಕೆಂದರೆ ಅವರು ಕಿರುಚಾಡಿ ಅಕ್ಕಪಕ್ಕದವರಿಗೆ ಗೊತ್ತಾದರೆ ಮತ್ತೆ ತಮ್ಮ ಪ್ಲಾನ್ ಉಲ್ಟಾ ಆಗುತ್ತೆ ಅಂದುಕೊಂಡು ಗೋಕಾಕ್‍ನಲ್ಲಿ ನಿದ್ರೆ ಮಾತ್ರಗಳನ್ನು ತಂದಿದ್ದರು. ಅದರಂತೆ ನಿದ್ರೆ ಮಾತ್ರೆಗಳನ್ನ ಕೇಕ್ ಹಾಗೂ ಟೀಯಲ್ಲಿ ಹಾಕಿದ್ದಾರೆ. ಹಾಕಿ ಮಕ್ಕಳಿಗೆ ಮೊದಲು ತಿನ್ನಿಸಿದ್ದಾರೆ. ಹೀಗೆ ತಿಂದ ಮಕ್ಕಳು ನಿದ್ರೆಗೆ ಜಾರಿದ್ದಾರೆ. ಹೀಗೆ ಮಕ್ಕಳು ಮಲಗುತ್ತಿದ್ದಂತೆ ಅವರಿಗೆ ನೇಣು ಹಾಕಿ ತಾವು ಒಂದೇ ಹಗ್ಗಕ್ಕೆ ಕೊರಳೋಡ್ಡಿದ್ದಾರೆ.

ಭೀಮಪ್ಪನ ತಾಯಿ ಯಲ್ಲವ್ವಾ ಸಂಜೆ 6.30ರ ಸುಮಾರಿಗೆ ಮನೆಗೆ ಬಂದು ಮಗನ ಮನೆ ಕದ ಬಡೆದಿದ್ದಾಳೆ. ಮಗ ಮಾತ್ರ ಕದ ತೆಗೆಯಲಿಲ್ಲ. ಅರ್ಧ ಗಂಟೆ ಸುಮ್ಮನಾದ ತಾಯಿ ಯಲ್ಲವ್ವಾ ಅಲ್ಲೇ ಪಕ್ಕದ ಮನೆಯ ಬಾಲಕನ್ನೊಬ್ಬನನ್ನ ಕರೆದು ಮನೆಯ ಹೆಂಚಿನ ಮೇಲೆ ಹತ್ತಿಸಿ ನೋಡಲು ಹೇಳಿದ್ದಳು. ಹೆಂಚು ತೆಗೆದುನೋಡಿದ ಬಾಲಕ ಗಣೇಶ ಎಲ್ಲರೂ ನೇಣು ಹಾಕಿಕೊಂಡಿದ್ದಾರೆ ಎಂದು ಹೇಳುತ್ತಾ ಗಾಬರಿಯಿಂದ ಕೆಳಗೆ ಜಿಗಿದಿದ್ದಾನೆ. ಇತ್ತ ಗ್ರಾಮಸ್ಥರು ಸೇರಿಕೊಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದರು. ಬಳಿಕ ಭೀಮಪ್ಪನ ಜಮೀನಿನಲ್ಲೇ ಒಂದೇ ಚಿತೆಯಲ್ಲಿ ನಾಲ್ಕು ಜನರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದಾದ ಬಳಿಕ ಸ್ಥಳಕ್ಕೆ ಬಂದ ಎಸ್.ಪಿ ಸ್ಥಳ ಪರಿಶೀಲನೆ ನಡೆಸಿ ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರಿಂದ ಮಾಹಿತಿ ಕಲೆಹಾಕಿ ತನಿಖೆ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಮಗನನ್ನು ದೊಡ್ಡ ಅಧಿಕಾರಿ ಮಾಡಬೇಕು. ಇದಕ್ಕಾಗಿ ಚೆನ್ನಾಗಿ ಓದಿಸಬೇಕೆಂದುಕೊಂಡಿದ್ದ ತಾಯಿ ಮೊದಲ ಮಗ ಪ್ರದೀಪ್‍ನನ್ನು ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದಿಸುತ್ತಿದ್ದಳು. ಹೀಗೆ ಮಕ್ಕಳ ಭವಿಷ್ಯವನ್ನ ಕಂಡಿದ್ದ ತಾಯಿಗೆ ಅದೇನಾಯ್ತೋ ಗಂಡನ ಮಾತು ಕೇಳಿ ಆ ಒಂದು ತಪ್ಪು ನಿರ್ಧಾವರನ್ನ ಕೈಗೊಂಡು ಪ್ರಾಣಬಿಟ್ಟಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *